ಡಿವಿಜಿ ಸುದ್ದಿ, ದಾವಣಗೆರೆ: ಗ್ರಾಮ ಪಂಚಾಯತಿ ಚುನಾವಣೆ ನಡೆಸಲು ರಾಜ್ಯ ಸರ್ಕಾರ ಸಿದ್ಧವಿದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ ಎಸ್ ಈಶ್ವರಪ್ಪ ಹೇಳಿದರು.
ಹರಿಹರದ ಕಾಗಿನೆಲೆ ಶಾಖಾ ಮಠದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿದ್ಯಾಗಮ ಯೋಜನೆಯಿಂದ ಶಿಕ್ಷಕರು, ಮಕ್ಕಳು ಕೊವಿಡ್ ನಿಂದ ಸಾವನ್ನಪ್ಪಿರುವುದು ಗೊತ್ತಿದೆ. ಇದೀಗ ಸದ್ಯ ಪದವಿ ಕಾಲೇಜಿಗೆ ಅನುಮತಿ ನೀಡಲಾಗಿದೆ. ಹೀಗಾಗಿ ಚುನಾವಣೆ ನಡೆದರೆ ಕೊವಿಡ್ ಹೆಚ್ಚಾಗಬಹುದು ಎಂಬ ಭಯವಿದೆ. ಈ ಬಗ್ಗೆ ಚುನಾವಣಾ ಆಯೋಗ ನ್ಯಾಯಾಲಯಲ್ಲಿ ಸ್ಪಷ್ಟಪಡಿಸಿದರೆ, ಚುನಾವಣೆ ನಡೆಸಲು ಸರ್ಕಾರ ಸಿದ್ಧವಿದೆ ಎಂದು ತಿಳಿಸಿದರು.
ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿಕೆಗೆ ಸಿಡಿಮಿಡಿಗೊಂಡ ಈಶ್ವರಪ್ಪ. ಯತ್ನಳ್ ಹೇಳಿಕೆಯಿಂದ ರಾಜ್ಯದಲ್ಲಿ ಒಂದು ಕಂಪನವೇ ಸೃಷ್ಟಿಯಾಯಿತು. ಅದಕ್ಕೆ ಪಕ್ಷ ಏನು ಬೇಕೋ ಅದನ್ನು ಮಾಡಿದೆ. ರಾಜ್ಯಾದ್ಯಕ್ಷರು ಈ ಬಗ್ಗೆ ಕ್ರಮ ಕೈಗೊಳ್ಳುತ್ತಾರೆ. ಇನ್ನು ಸಿದ್ದರಾಮಯ್ಯಗೆ ಪ್ರತಿ ಮಾತಿಗೂ ಪ್ರತಿಕ್ರಿಯೆ ಕೊಡೋದು ಹವ್ಯಾಸ .ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದಾಗ, ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷರಾಗಿದ್ದಾಗ ಯಾವ್ಯಾವ ಮಂತ್ರಿಗಳು ಹೇಗೆ ಕೆಲಸ ಮಾಡಿದ್ದಾರೆ ಎಂಬುದನ್ನು ನೋಡಿದ್ದೇವೆ ಎಂದರು.
ಪರಿಷತ್ ಹಾಗು ಉಪಚುನಾವಣೆಯಲ್ಲಿ ಬಿಜೆಪಿ ಗೆಲುವು ಖಚಿತ. ಶಿರಾ, ರಾಜರಾಜೇಶ್ವರಿ ನಗರ ಉಪಚುನಾವಣೆ ಮುಂದಿನ ಚುನಾವಣೆ ದಿಕ್ಸೂಚಿ ಎಂದು ಸಿದ್ದರಾಯ್ಯ ಸವಾಲು ಸ್ವೀಕರಿಸಲು ನಾವು ಸಿದ್ಧ. ಲೊಕಸಭಾ ಚುನಾವಣೆಯೂ ಕೂಡ ಮುಂದಿನ ವಿಧಾನ ಸಭಾ ಚುನಾವಣೆ ದಿಕ್ಸೂಚಿ ಅಂತ ಹೇಳಿದ್ದರು. ಆದರೆ ಕಾಂಗ್ರೆಸ್ ಕೇವಲ 1 ಕ್ಷೇತ್ರದಲ್ಲಿ ಗೆದ್ದಿತು. ಸಮ್ಮಿಶ್ರ ಸರ್ಕಾರ ಪತನವಾಗಿ 12 ಕ್ಷೇತ್ರಕ್ಕೆ ನಡೆದ ಚುನಾವಣೆಯಲ್ಲಿ ಬಿಜೆಪಿಯವರು ಯಾರು ಗೆಲ್ಲಲ್ಲ ಅಂತ ಸಿದ್ದರಾಮಯ್ಯನವರು ಹೇಳಿದ್ದರು. ಇದರಲ್ಲಿ ಕಾಂಗ್ರೆಸ್ ಕೇವಲ ಎರಡು ಕ್ಷೇತ್ರಗಳಲ್ಲಿ ಗೆದ್ದಿದೆ. ಇದೀಗ ಉಪಚುನಾವಣೆ, ಪರಿಷತ್ ಚುನಾವಣೆ ಮುಂದಿನ ಚುನಾವಣೆ ದಿಕ್ಸೂಚಿ ಎಂದರೆ, ನಾವು ಅದನ್ನು ಸ್ವೀಕರಿಸಲು ಸಿದ್ಧವಿದ್ದೇವೆ ಎಂದರು.



