ಕೊಪ್ಪಳ: ದೆಹಲಿಯಲ್ಲಿ ಪ್ರತಿಭಟನೆ ಮಾಡುತ್ತಿರುವವರು ರೈತರಲ್ಲ, ಇದೊಂದು ಭಯೋತ್ಪಾದಕರ ಭಯಾನಕ ಕೃತ್ಯ ಎಂದು ಕೃಷಿ ಸಚಿವ ಬಿ ಸಿ ಪಾಟೀಲ್ ಅವರು ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೆಹಲಿಯಲ್ಲಿ ಪ್ರತಿಭಟನೆ ಮಾಡುತ್ತಿರುವವರು ಭಯೋತ್ಪಾದಕರು. ಇವರಿಗೆಲ್ಲ ಬೇರೆ ಬೇರೆ ದೇಶದ ಬೆಂಬಲ ಸೇರಿದಂತೆ ಕಾಂಗ್ರೆಸ್ ಬೆಂಬಲ ಭಯೋತ್ಪಾದಕರಿಗೆ ಇದೆ ಎಂದಿದ್ದಾರೆ.
ರೈತರು ಯಾವತ್ತೂ ಕಾನೂನನ್ನು ತಮ್ಮ ಕೈಗೆ ತೆಗೆದುಕೊಂಡಿದ್ದು ಇತಿಹಾಸದಲ್ಲಿ ಇಲ್ಲ. ಇವರಿಗೆಲ್ಲ ಪಾಕಿಸ್ತಾನದವರ ಕುಮ್ಮಕ್ಕು ಇದೆ. ಕೆಂಪು ಕೋಟೆ ಬಳಿ ಹೋಗಿ ಗಲಾಟೆ ಮಾಡುತ್ತಾರೆ ಎಂದ್ರೆ ನೀವೆ ಅರ್ಥ ಮಾಡಿಕೊಳ್ಳಿ. ಪ್ರಧಾನಿ ಮೋದಿ ಜನಪ್ರಿಯತೆ ಕಂಡು ಹತಾಶಾರಾಗಿದ್ದಾರೆ. ಮೋದಿ ಸರ್ಕಾರ ಅಲುಗಾಡಿಸಲು ಸಾಧ್ಯವಿಲ್ಲ ಎಂದು ಭಯೋತ್ಪಾದಕರನ್ನು ಕರೆತಂದು ಅವರಿಗೆ ರೈತರ ಹೆಸರಿಟ್ಟು ಭಯೋತ್ಪಾದನೆ ಮಾಡಿಸಿದ್ದಾರೆ. ಇವರಿಗೆ ಪಾಕಿಸ್ತಾನದ ಸಂಪೂರ್ಣ ಕುಮ್ಮಕ್ಕಿದೆ. ಕಾಂಗ್ರೆಸ್ ಕುಮ್ಮಕ್ಕಿದೆ. ನಾವು ಇದನ್ನು ಖಂಡಿಸುತ್ತೇವೆ ಎಂದರು.
ಕೆಂಪು ಕೋಟೆಗೆ ತನ್ನದೇ ಆದ ಇತಿಹಾಸವಿದೆ. ರಾಷ್ಟ್ರದ ಧ್ವಜಾರೋಹಣ ಮಾಡಲು ಒಂದು ಪದ್ದತಿ ಇದೆ. ರೈತ ಒಬ್ಬ ಪ್ರಧಾನಿಯಾಗಿ ಹೋಗಿ ರಾಷ್ಟ್ರ ಧ್ವಜಾರೋಹಣ ಮಾಡಲಿ. ಅದಕ್ಕೆ ನಮ್ಮ ತಕರಾರಿಲ್ಲ. ಆದರೆ ರೈತರ ಹೆಸರಿನಲ್ಲಿ ಅಲ್ಲಿ ಹೋಗಿ ಯಾವುದೋ ಬಾವುಟ ಹಾರಿಸುತ್ತಾರೆ ಅಂದರೆ ಅವರೆಲ್ಲ ಯಾರು? ಅವರೆಲ್ಲ ಭಯೋತ್ಪಾದಕರು. ಯಾರೇ ಕಾನೂನು ಕೈಗೆ ತಗೆದುಕೊಂಡರೂ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗವುದು ಎಂದು ಬಿ ಸಿ ಪಾಟೀಲ್ ಹೇಳಿದರು.