ಕೋಲಾರ:ಮಾಜಿ ಸಚಿವ ವರ್ತೂರು ಪ್ರಕಾಶ್ ಅವರ ಕಾರಿನಲ್ಲಿ ಕಿಡ್ನಾಪ್ ಮಾಡಿ 30 ಕೋಟಿ ಹಣಕ್ಕೆ ಬೇಡಿಕೆ ಇಟ್ಟಿದ್ದ ಇಬ್ಬರು ವಿದ್ಯಾರ್ಥಿಗಳು ಸೇರಿ 6 ಮಂದಿಯನ್ನು ಕೋಲಾರ ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೇಂದ್ರ ವಲಯದ ಐಜಿಪಿ ಸೀಮಂತ್‍ಕುಮಾರ್ ಸಿಂಗ್, ತಮಿಳುನಾಡು ಮೂಲದ ಬೆಂಗಳೂರಿನ ವಿನಾಯಕನಗರದಲ್ಲಿ ವಾಸಿಸುತ್ತಿರುವ ಕವಿರಾಜ್ (43), ಬೆಳ್ಳಂದೂರು-ಸರ್ಜಾಪುರ ರಸ್ತೆಯ ಅರಳೂರು ನಿವಾಸಿ, ಬಿಕಾಂ ವಿದ್ಯಾರ್ಥಿಗಳಾದ ಲಿಖಿತ್ (20), ಉಲ್ಲಾಸ್ (21), ಪ್ರವೀಣ್ (20), ಎಚ್‍ಎಸ್‍ಆರ್ ಲೇಔಟ್‍ನ ಮನೋಜ್ (20), ಅಗದೂರಿನ ರಾಘವೇಂದ್ರ (34) ಬಂಧಿತ ಆರೋಪಿಗಳನ್ನು ಬಂಧಿಸಲಾಗಿದೆ.
ಕೃತ್ಯಕ್ಕೆ ಬಳಸಿದ್ದ ಇನೋವಾ ಕಾರು, ಎರಡು ಮಾರುತಿ ಸ್ವಿಫ್ಟ್ ಕಾರು, ಒಂದು ಮಾರುತಿ ರಿಟ್ಜ್ ಕಾರು, ಕೆಟಿಎಂ ಡ್ಯೂಕ್ ಬೈಕ್, ಮಾರಕಾಸ್ತ್ರಗಳು ಮತ್ತು 20.5 ಲಕ್ಷ ಹಣ ವಶಪಡಿಸಿಕೊಳ್ಳಲಾಗಿದೆ. ನ.25ರಂದು ಮಾಜಿ ಸಚಿವ ವರ್ತೂರು ಪ್ರಕಾಶ್ ಅವರು ಚಾಲಕ ಸುನಿಲ್ ಎಂಬಾತನೊಂದಿಗೆ ಬೆಗ್ಲಿ ಹೊಸಹಳ್ಳಿ ಫಾರಂ ಹೌಸ್‍ನಿಂದ ಫಾರ್ಚೂನರ್ ಕಾರಿನಲ್ಲಿ ಬರುತ್ತಿದ್ದಾಗ ಎರಡು ಕಾರುಗಳಲ್ಲಿ ಬಂದ ಎಂಟು ಮಂದಿ ಅಪಹರಣ ಮಾಡಿದ್ದರು. ಇವರ ಕಾರನ್ನು ಅಡ್ಡಗಟ್ಟಿ ಬಲವಂತವಾಗಿ ಅಪಹರಿಸಿ 30 ಕೋಟಿ ಹಣಕ್ಕೆ ಬೇಡಿಕೆ ಇಟ್ಟಿದ್ದರು.
48 ಲಕ್ಷ ರೂ.ಗಳನ್ನು ವರ್ತೂರು ಪ್ರಕಾಶ್ ಅವರ ಪರಿಚಯಸ್ಥರಿಂದ ಪಡೆದುಕೊಂಡು ನ.28ರಂದು ಬೆಳಗಿನ ಜಾವ 4 ಗಂಟೆ ಸುಮಾರಿಗೆ ನಂದಗುಡಿ ಹೋಬಳಿ, ಶಿವನಾಪುರ ಗ್ರಾಮದ ಬಳಿ ಬಿಟ್ಟು ಪರಾರಿಯಾಗಿದ್ದರು. ಈ ಬಗ್ಗೆ ವರ್ತೂರು ಪ್ರಕಾಶ್ ಅವರು ನೀಡಿದ ದೂರಿನ ಮೇರೆಗೆ ಬೆಳ್ಳಂದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಪ್ರಕರಣ ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆಗೆ ವರ್ಗಾವಣೆಯಾಗಿತ್ತು.
ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಅಪಹರಣಕಾರರ ಪತ್ತೆಗೆ ನಾಲ್ಕು ತಂಡಗಳನ್ನು ರಚಿಸಲಾಗಿತ್ತು. ಕೋಲಾರ ಉಪವಿಭಾಗದ ಎಎಸ್‍ಪಿ ಸಾಹಿಲ್ ಬಾಗ್ಲಾ ಅವರು ತನಿಖೆಯ ನೇತೃತ್ವ ವಹಿಸಿದ್ದರು. ಆರೋಪಿಗಳ ಪತ್ತೆಗೆ ಒಬ್ಬರು ಎಎಸ್‍ಪಿ, ಮೂವರು ಸಿಪಿಐ, ಮೂವರು ಪಿಎಸ್‍ಐ, ಇಬ್ಬರು ಎಎಸ್‍ಐ, 4 ಮಂದಿ ಹೆಡ್‍ಕಾನ್ಸ್‍ಟೆಬಲ್ ಮತ್ತು 6 ಮಂದಿ ಕಾನ್ಸ್‍ಟೆಬಲ್ ಒಳಗೊಂಡ ನಾಲ್ಕು ತಂಡಗಳನ್ನು ಎಸ್‍ಪಿ ಅವರು ನೇಮಕ ಮಾಡಿದ್ದರು.
ನಿಖರ ಮಾಹಿತಿ ಪಡೆದು ಒಂದು ತಂಡ ತಮಿಳುನಾಡಿಗೆ ತೆರಳಿ ಆರೋಪಿಯನ್ನು ಬೆನ್ನಟ್ಟಿ ಹಿಡಿದು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ. ಅಪಹರಣಕಾರರನ್ನು ಬಂಧಿಸುವಲ್ಲಿ ಯಶಸ್ವಿಯಾದ ತಂಡಕ್ಕೆ ಸೀಮಂತ್‍ಕುಮಾರ್ ಸಿಂಗ್ ಅವರು 50 ಸಾವಿರ ಬಹುಮಾನ ಘೋಷಿಸಿದ್ದಾರೆ.



