ಚಾಮರಾಜನಗರ: ಶಾಲಾ ಕಾಲೇಜುಗಳ ಪಠ್ಯ ಪುಸ್ತಕಗಳಲ್ಲಿ ಶೇಕಡ 30ರಷ್ಟು ಕಡಿತ ಮಾಡಲಾಗುವುದು. ಈ ಬಗ್ಗೆ ಇಂದು ಸಂಜೆ ಶಿಕ್ಷಣ ಆಯುಕ್ತರು ಮಾಹಿತಿ ನೀಡಲಿದ್ದಾರೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಖಾಸಗಿ ಶಾಲೆಗಳ ಶುಲ್ಕದ ಬಗ್ಗೆ ಜನವರಿ 15 ರ ನಂತರ ತಜ್ಞರ ಅಭಿಪ್ರಾಯ ಪಡೆಯಲಾಗುವುದು. ತಜ್ಞರ ಮಾಹಿತಿ ಆಧರಿಸಿ ಶಾಲಾ ಕಾಲೇಜುಗಳ ಶುಲ್ಕ ನಿಗದಿಪಡಿಸಲಾಗುವುದು ಎಂದರು.
ಕೆಲವು ಖಾಸಗಿ ಸಂಸ್ಥೆಗಳು ಶೇಕಡ 30ರಷ್ಟು ಶುಲ್ಕ ಖಡಿತಗೊಳಿಸಲು ಮುಂದೆ ಬಂದಿವೆ. ಶುಲ್ಕ ಹೆಚ್ಚು ಕಡಿತಗೊಳಿಸಿದರೆ ಶಿಕ್ಷಕರು, ಉಪನ್ಯಾಸಕರ ವೇತನಕ್ಕೂ ತೊಂದರೆ ಆಗಲಿದೆ. ಪೂರ್ತಿ ಶುಲ್ಕ ತುಂಬಲು ಪೋಷಕರಿಗೆ ಹೊರೆ ಆಗಲಿದೆ. ಶಿಕ್ಷಣ ಸಂಸ್ಥೆ ಮತ್ತು ಪೋಷಕರನ್ನು ಗಮನದಲ್ಲಿ ಇಟ್ಟು ಕೊಂಡು ಶುಲ್ಕ ನಿಗದಿ ಮಾಡಲಾಗುವುದು. ಒಂದನೇ ತರಗತಿಯಿಂದ ತರಗತಿ ಆರಂಭಿಸುವ ಕುರಿತು ಜ. 15ರ ನಂತರ ತಜ್ಞರು ನೀಡುವ ವರದಿ ಬಳಿಕ ತೀರ್ಮಾನ ಮಾಡುತ್ತೇವೆ ಎಂದು ಸುರೇಶ್ ಕುಮಾರ್ ಹೇಳಿದರು.



