ಡಿವಿಜಿ ಸುದ್ದಿ, ದಾವಣಗೆರೆ: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ವಿವಿಧ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಖಾಲಿ ಇರುವ ವೈದ್ಯಾಧಿಕಾರಿಗಳ 08 ಹುದ್ದೆಗಳನ್ನು ಗುತ್ತಿಗೆ ಆಧಾರದಲ್ಲಿ ನೇಮಕಾತಿ ಮಾಡಿಕೊಳ್ಳಲು, ಎಂ.ಬಿ.ಬಿ.ಎಸ್. ವೈದ್ಯ ಅಭ್ಯರ್ಥಿಗಳಿಗೆ ನ. 13 ರಂದು ನೇರ ಸಂದರ್ಶನ ಏರ್ಪಡಿಸಿದ್ದು, ಆಸಕ್ತ ಭಾಗವಹಿಸುವಂತೆ ಸೂಚನೆ ನೀಡಲಾಗಿದೆ.
ದಾವಣಗೆರೆ ತಾಲ್ಲೂಕಿನ ಹೆಮ್ಮನಬೇತೂರು, ಹೂವಿನಮಡು. ಜಗಳೂರು ತಾಲ್ಲೂಕು ಸೊಕ್ಕೆ, ಬಿದರಕೆರೆ. ಚನ್ನಗಿರಿ ತಾಲ್ಲೂಕಿನ ನಲ್ಲೂರು, ತಾವರೆಕೆರೆಯ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ತಲಾ 01 ಹುದ್ದೆ. ಹೊನ್ನಾಳಿ ತಾಲ್ಲೂಕು ನ್ಯಾಮತಿ ಹಾಗೂ ಚನ್ನಗಿರಿ ತಾಲ್ಲೂಕು ಕೆರೆಬಿಳಚಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ತಲಾ 01 ಹುದ್ದೆಯನ್ನು ಒಂದು ವರ್ಷದ ಅವಧಿಗೆ ಎಂ.ಬಿ.ಬಿ.ಎಸ್. ವೈದ್ಯರುಗಳನ್ನು ಮಾತ್ರ ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲಾಗುವುದು.
ಆಸಕ್ತರು ನ. 13 ರಂದು ಬೆಳಿಗ್ಗೆ 11 ಗಂಟೆಗೆ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ನಡೆಯುವ ನೇರ ಸಂದರ್ಶನ (ವಾಕ್ ಇನ್ ಇಂಟವ್ರ್ಯೂ) ದಲ್ಲಿ ಭಾಗವಹಿಸಬೇಕು. ಅಭ್ಯರ್ಥಿಗಳು ಅಂಗೀಕೃತ ವಿಶ್ವವಿದ್ಯಾಲಯದಿಂದ ಎಂಬಿಬಿಎಸ್ ಪದವಿ ಪಡೆದಿರಬೇಕು ಹಾಗೂ ಕಡ್ಡಾಯವಾಗಿ ನೊಂದಣಿ ಪ್ರಾಧಿಕಾರದಲ್ಲಿ ನೊಂದಣಿ ಆಗಿರಬೇಕು.
ಆಸಕ್ತ ಅಭ್ಯರ್ಥಿಗಳು ನ. 12 ರಂದು ಬೆಳಿಗ್ಗೆ 10-30 ರಿಂದ ಮಧ್ಯಾಹ್ನ 01-30 ರ ಒಳಗಾಗಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಚೇರಿಗೆ ಹಾಜರಾಗಿ ಸಂಬಂಧಪಟ್ಟ ವಿದ್ಯಾರ್ಹತೆ, ಮೀಸಲಾತಿಯ ಅರ್ಹತಾ ಮೂಲ ದಾಖಲೆಗಳ ಪರಿಶೀಲನೆ ಮಾಡಿಸಿ, ದಾಖಲೆಗಳ ಒಂದು ಸೆಟ್ ದೃಢೀಕೃತ ಪ್ರತಿಗಳನ್ನು ಸಲ್ಲಿಸುವಂತೆ ಸೂಚನೆ ನೀಡಲಾಗಿದೆ. ಖಾಲಿ ಇರುವ 08 ಹುದ್ದೆಗಳಲ್ಲಿ ಸಾಮಾನ್ಯ ವರ್ಗ-05, ಪ್ರವರ್ಗ 2ಎ-02 ಹಾಗೂ ಪ್ರವರ್ಗ 1 ಕ್ಕೆ 01 ಹುದ್ದೆಗಳು ಮೀಸಲಿದೆ.
ಸರ್ಕಾರಿ ಸೇವೆಯಿಂದ ವಯೋನಿವೃತ್ತಿ ಹೊಂದಿರುವ ವೈದ್ಯರನ್ನೂ ಕೂಡ 60 ಸಾವಿರ ರೂ. ಗಳ ಮಾಸಿಕ ಗೌರವ ಸಂಭಾವನೆಯಾಗಿ ನೀಡಿ, ಗುತ್ತಿಗೆ ವೈದ್ಯರನ್ನಾಗಿ ನೇಮಿಸಿಕೊಳ್ಳಲಾಗುವುದು. ಮೀಸಲಾತಿ, ವಯೋಮಿತಿ ಸೇರಿದಂತೆ ಹೆಚ್ಚಿನ ವಿವರಗಳನ್ನು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಚೇರಿ, ದಾವಣಗೆರೆ, 08192-237833 ಇವರಿಂದ ಪಡೆಯಬಹುದು ಎಂದು ಪ್ರಕಟಣೆ ತಿಳಿಸಿದೆ.



