ಡಿವಿಜಿ ಸುದ್ದಿ, ಹುಬ್ಬಳ್ಳಿ: ಕೂಡಲಸಂಗಮ ಹಾಗೂ ನಮ್ಮ ಪೀಠ ಯಾವತ್ತಿದ್ದರೂ ಒಂದೇ. ನಾವು ಅಣ್ಣ–ತಮ್ಮಂದಿರು ಇದ್ದಂತೆ. ನಮ್ಮ ಬಟ್ಟೆಯ ಬಣ್ಣ ಒಂದೇ, ನೀವು ಬೇರೆ ಬೇರೆ ಬಣ್ಣದ ಬಟ್ಟೆಗಳನ್ನು ಧರಿಸಿದ್ದೀರಿ. ಹೀಗಾಗಿ ಮೊದಲು ನೀವು ಒಂದಾಗಬೇಕು. ಆಗ ಮಾತ್ರ ಮೀಸಲಾತಿ ಹೋರಾಟಕ್ಕೆ ಶಕ್ತಿ ಬರಲು ಸಾಧ್ಯ ಎಂದು ಹರಿಹರ ಪಂಚಮಸಾಲಿ ಪೀಠದ ವಚನಾನಂದ ಸ್ವಾಮೀಜಿ ಹೇಳಿದರು.
ನಗರದಲ್ಲಿ ಕಿತ್ತೂರುರಾಣಿ ಚನ್ನಮ್ಮ ವಿಜಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಮಾಜದ ಒಳ ಜಗಳದಿಂದ ಜನರು ಬಡವಾಗಬಾರದು. ಹೀಗಾಗಿ ಸಮಾಜದ ಜನರ ಅಭಿಪ್ರಾಯ ತಿಳಿಯಲು ಹಳ್ಳಿಗಳಲ್ಲಿ ಜನಜಾಗೃತಿ ಕಾರ್ಯಕ್ರಮ ಕೈಗೊಂಡು ಈ ಮೂಲಕ ಮೀಸಲಾತಿ ಜಾಗೃತಿ ಮೂಡಿಸಲಾಗುವುದು ಎಂದರು.
ಮೀಸಲಾತಿ ಹೋರಾಟ ಎಲ್ಲ ವಯಸ್ಸಿನವರಿಗೆ ಗೊತ್ತಾಗಬೇಕು. ನಮ್ಮ ಹೋರಾಟದ ಫಲ ನಮಗೇ ಸಿಗುತ್ತದೆಯೊ; ಇಲ್ಲವೊ ಗೊತ್ತಿಲ್ಲ. ಮುಂದಿನ ಪೀಳಿಗೆಯವರಿಗಾದರೂ ಸಿಗಲಿ. ಉತ್ತರ ಕರ್ನಾಟಕದ ಜನ ಮನಸ್ಸು ಮಾಡಿದರೆ ರಾಜ್ಯದಲ್ಲಿ ಪಂಚಮಸಾಲಿ ಸಮಾಜ ಉನ್ನತ ಸ್ಥಾನದಲ್ಲಿ ಬೆಳೆಯಲಿದೆ. ಪಂಚಮಸಾಲಿ ಸಮಾಜವನ್ನು ರಾಜ್ಯ ಸರ್ಕಾರ ’2ಎ’ಗೆ ಸೇರ್ಪಡೆ ಮಾಡಬೇಕು ಎಂದು ಹಕ್ಕೊತ್ತಾಯ ಮಾಡಲು ಬೆಳಗಾವಿಯಲ್ಲಿ ನಡೆಯುವ ಉಪವಾಸ ಸತ್ಯಾಗ್ರಹಕ್ಕೆ ಸಂಪೂರ್ಣ ಬೆಂಬಲ ನೀಡುತ್ತೇವೆ ಎಂದರು.