ದಾವಣಗೆರೆ: ನಿಮ್ಮ ಮನೆ ಮುಂದೆ ಕಾರು, ಆಟೋ ನಿಲ್ಲಿಸುತ್ತಿದ್ದರೇ ಹುಷಾರ್..! ನಗರದಲ್ಲಿ ಮನೆಮುಂದೆ ನಿಲ್ಲಿಸಿರುವ ಗೂಡ್ಸ್ ಆಟೋ, ಕಾರುಗಳನ್ನು ಗುರಿಯಾಗಿಸಿಕೊಂಡ ಕಳ್ಳನೋರ್ವ ಬ್ಯಾಟರಿಗಳನ್ನು ಕದಿಯುತ್ತಿರುವ ಪ್ರಕರಣ ಬೆಳಕಿಗೆ ಬಂದಿದೆ.
ಈ ಕಳ್ಳನಿಗೆ ವಾಹನ ಬ್ಯಾಟರಿಗಳೇ ಟಾರ್ಗೆಟ್ ಆಗಿವೆ. ರಾತ್ರಿ ಆಗುತ್ತಿದ್ದಂತೆ ಬ್ಯಾಟರಿ ಕಳ್ಳತನ ಪ್ಯ್ಲಾನ್ ಹಾಕುವ ಈತ, ಬೆಳಗಾಗುವುದರೊಳಗೆ ಬ್ಯಾಟರಿ ಕಳ್ಳತನ ಮಾಡುತ್ತಾನೆ. ಈ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ನಗರದ ನಿಟ್ಟುವಳ್ಳಿಯ ಮೌನೇಶ್ವರ ಬಡಾವಣೆಯ ಮನೆ ಮುಂದೆ ನಿಲ್ಲಿಸಿದ್ದ ಗೂಡ್ಸ್ ಆಟೋದಲ್ಲಿ ಅಳವಡಿಸಿದ್ದ ಬ್ಯಾಟರಿ ಕದಿಯುತ್ತಿರುವ ದೃಶ್ಯ ಸೆರೆಯಾಗಿದೆ.
ಗೂಡ್ಸ್ ಆಟೋ ಮಾಲೀಕ ರಮೇಶ್ ಎಂಬುವರಿಗೆ ಸೇರಿದ ಆಟೋದ ಬ್ಯಾಟರಿ ಕಳುವಾಗಿದ್ದು, ಇಂತಹ ಪ್ರಕರಣಗಳಿಂದ ಇಲ್ಲಿನ ನಿವಾಸಿಗಳು ರೋಸಿ ಹೋಗಿದ್ದಾರೆ. ಘಟನೆ ಕೆಟಿಜೆ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ನಿವಾಸಿಗಳು ಸಾಕಷ್ಟು ಬಾರಿ ಪೊಲೀಸರ ಗಮನಕ್ಕೆ ತಂದಿದ್ದಾರೆ.



