ದಾವಣಗೆರೆ: ನ. 5 ರಂದು ಶ್ರೀ ಶಿವಯೋಗಾಶ್ರಮದಲ್ಲಿ ಎರಡನೇ ವರ್ಷದ ಜಿಲ್ಲಾಮಟ್ಟದ ಯೋಗಾಸನ ಸ್ಪರ್ಧೆ ಆಯೋಜಿಸಲಾಗಿದೆ. ಜಿಲ್ಲಾ ಯೋಗಾಸನ ಮತ್ತು ಕ್ರೀಡೆ ಸಂಸ್ಥೆ, ಶ್ರೀ ಜಯದೇವ ಯೋಗ ಮತ್ತು ಧ್ಯಾನ ಕೇಂದ್ರ, ಶ್ರೀ ಜಗದ್ಗುರು ಮುರುಘರಾಜೇಂದ್ರ ಶಿವಯೋಗಾಶ್ರಮ ಟ್ರಸ್ಟ್ ಸಹಯೋಗದೊಂದಿಗೆ ಈ ಸ್ಪರ್ಧೆ ನಡೆಯಲಿದೆ ಎಂದು ಸುದ್ದಿಗೋಷ್ಠಿಯಲ್ಲಿ ಡಾ. ಎಸ್. ಬಿ. ರವಿಕುಮಾರ್ ಮಾಹಿತಿ ನೀಡಿದ್ದಾರೆ.
ಯೋಗಾಸನ ಉತ್ತೇಜಿಸುವ ಉದ್ದೇಶದಿಂದ ಎರಡನೇ ಬಾರಿಗೆ ಯೋಗ ಸ್ಪರ್ಧೆ ಹಮ್ಮಿಕೊಳ್ಳಲಾಗಿದೆ. 8 ರಿಂದ 50 ವರ್ಷದ ವರೆಗಿನ ವಿಭಾಗದಲ್ಲಿ ಸ್ಪರ್ಧೆ ನಡೆಯಲಿವೆ. ಪ್ರತಿ ವಿಭಾಗದಲ್ಲಿ ಪ್ರಥಮ, ದ್ವಿತೀಯ, ತೃತೀಯ ಪ್ರಶಸ್ತಿ ಪತ್ರ, ಮೆಡಲ್ ನೀಡಲಾಗುವುದು. ಇದಲ್ಲದೆ, 4,5,6 ಸ್ಥಾನ ಪಡೆದವರಿಗೂ ಪ್ರಮಾಣ ಪತ್ರ ನೀಡಲಾಗುತ್ತದೆ ಎಂದು ತಿಳಿಸಿದರು.
ಆಸಕ್ತರು ಅ. 31 ರೊಳಗಾಗಿ https://forms.gle/qil53eoNAnjpeZJA6ಮೂಲಕ ಹೆಸರು ನೋಂದಣಿ ಮಾಡಿಕೊಳ್ಳಬಹುದು. ಈವರೆಗೆ 60 ಜನರು ನೋಂದಣಿ ಮಾಡಿಸಿದ್ದಾರೆ. 250 ರಿಂದ 300 ಸ್ಪರ್ಧಿಗಳು ಭಾಗವಹಿಸುವ ನಿರೀಕ್ಷೆ ಇದೆ ಎಂದು ತಿಳಿಸಿದರು.
ಸ್ಪರ್ಧಿಗಳು ಬಿ.ಕೆ.ಎಸ್. ಅಯ್ಯಂಗಾರ್ ಅವರ ಯೋಗ ದೀಪಿಕಾದಲ್ಲಿರುವಂತೆ ಜಾನು ಶಿರ್ಷಾಸನ, ಭುಜಂಗಾಸನ, ಹಲಾ ಸನ, ಪಶ್ಚಿಮೋತ್ತಾಸನ, ವೀರಭದ್ರಾಸನ, ವೃಕ್ಷಾಸನ, ಅರ್ಧಮತ್ಸೇಂದ್ರಾಸನ, ಪಾರ್ಶ್ವ ಕೋನಾಸನ…ಈ ಒಂಭತ್ತು ಆಸನಗಳಲ್ಲಿ ಕಡ್ಡಾಯವಾಗಿ ಮೂರು ಮತ್ತು ಎರಡು ಐಚ್ಛಿಕ ಆಸನ ಪ್ರದರ್ಶನ ಮಾಡಬೇಕು. ಹತ್ತು ಸೆಕೆಂಡ್ ಸ್ಥಿರತೆ ತೋರಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಕೇಂದ್ರದ ಅಧ್ಯಕ್ಷ ಶರಣಾರ್ಥಿ ಬಕ್ಕಪ್ಪ, ಸೋಗಿ ಶಾಂತಕುಮಾರ್, ಕೆ.ಎಂ. ಉಮಾ ಶಂಕರ್, ಜೆ.ಎಸ್. ಅಜ್ಜಪ್ಪ, ಜಿ.ಎಸ್. ವೀರಣ್ಣ, ನಾಗರಾಜ್ ಕುರ್ಡೇಕರ್, ಸಿ. ಮಂಜುನಾಥ್ ಇತರರು ಇದ್ದರು.