ದಾವಣಗೆರೆ: ಯೋಗಾಭ್ಯಾಸದಿಂದ ಒತ್ತಡ ಮುಕ್ತ ಬದುಕಿಗೆ ಸಹಕಾರಿಯಾದರೆ, ಮತದಾನದಿಂದ ಸದೃಢ ಸರ್ಕಾರ ರಚನೆಯಾಗಲು ಸಹಕಾರಿಯಾಗಲಿದೆ. ಯೋಗ ಮತ್ತು ಮತದಾನದಿಂದ ನಾಗರಿಕರ ಕ್ರಿಯಾಶೀಲತೆಯನ್ನು ಹೆಚ್ಚಿಸುತ್ತದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಡಾ; ವೆಂಕಟೇಶ್ ಎಂ.ವಿ ತಿಳಿಸಿದರು.
ಆಫೀಸರ್ಸ್ ಕ್ಲಬ್‍ನಲ್ಲಿ ಲೋಕಸಭಾ ಚುನಾವಣಾ ಮತದಾರರ ಜಾಗೃತಿ ಅಂಗವಾಗಿ ಏರ್ಪಡಿಸಲಾದ ಯೋಗ ತರಬೇತಿ ಶಿಬಿರ ಉದ್ಘಾಟನೆ ಹಾಗೂ ಮತದಾರರ ಜಾಗೃತಿ ಕರಪತ್ರ ಬಿಡುಗಡೆ ಮಾಡಿ ಮಾತನಾಡಿದರು. ಯೋಗ ಮತ್ತು ಮತದಾನ ನಾಗರಿಕರ ಕ್ರಿಯಾಶೀಲತೆಯನ್ನು ಹೆಚ್ಚಿಸುತ್ತದೆ. ಪ್ರತಿಯೊಂದು ಮತ ಅಮೂಲ್ಯ, ಶ್ರೇಷ್ಟ, ಶಕ್ತಿಯುತವಾದದು. ಕಳೆದ ಲೋಕಸಭಾ ಚುನಾವಣೆಯಲ್ಲಿ ಕ್ಷೇತ್ರದಲ್ಲಿ ಕೆಲವು ಕಡೆ ಶೇ 90 ರಷ್ಟು ಮತದಾನವಾಗಿದ್ದರೆ, ಕೆಲವು ಕಡೆ ಶೇ 20 ರಷ್ಟು ಮತದಾನವಾಗಿದೆ. ಏಕೆ ಇಷ್ಟೊಂದು ವ್ಯತ್ಯಾಸವಾಗಿದೆ ಎಂದು ನಾಗರಿಕರು ಆತ್ಮಾವಲೋಕನ ಮಾಡಿಕೊಳ್ಳಬೇಕು.
ಚುನಾವಣೆಯಲ್ಲಿ ಹೆಚ್ಚು ಮತದಾನವಾದಾಗ ಸಮರ್ಥ ನಾಯಕನನ್ನು ಆಯ್ಕೆ ಮಾಡಲು ಸಾಧ್ಯವಾಗುತ್ತದೆ. ಈ ದೃಷ್ಟಿಯಿಂದ ಎಲ್ಲರೂ ಮತದಾನ ಹಬ್ಬದಲ್ಲಿ ಭಾಗಿಯಾಗುವ ಮೂಲಕ ಪ್ರಜಾಪ್ರಭುತ್ವದ ಗೆಲುವಿಗೆ ಶ್ರಮಿಸಬೇಕಾಗಿದೆ. ಮತದಾನದಲ್ಲಿ ಹಿರಿಯ ನಾಗರಿಕರು, ಯುವ ಮತದಾರರು ಸೇರಿದಂತೆ ಎಲ್ಲರೂ ಸಕ್ರಿಯವಾಗಿ ಭಾಗವಹಿಸಬೇಕೆಂದು ಮನವಿ ಮಾಡಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ಸ್ವೀಪ್ ಸಮಿತಿ ಅಧ್ಯಕ್ಷರಾದ ಸುರೇಶ್ ಬಿ.ಇಟ್ನಾಳ್ ಮಾತನಾಡಿ 2019 ರ ಲೋಕಸಭಾ ಚುನಾವಣೆಯಲ್ಲಿ ಶೇ 72.96 ರಷ್ಟು ಮತದಾನವಾಗಿತ್ತು. ಈ ಚುನಾವಣೆಯಲ್ಲಿ ಶೇ 85 ಕ್ಕಿಂತ ಹೆಚ್ಚು, ಶೇ 90 ರವರೆಗೆ ಮತದಾನ ಮಾಡಿಸಬೇಕೆಂದು ಎಲ್ಲಾ ಪ್ರಯತ್ನ ಮಾಡಲಾಗುತ್ತಿದೆ. ಪ್ರಜಾಪ್ರಭುತ್ವದ ಆರೋಗ್ಯಕ್ಕೆ ಹೆಚ್ಚಿನ ಮತದಾನ ಅತ್ಯವಶ್ಯಕವಾಗಿದೆ. ಈ ಭಾರಿಯ ಮತದಾರರ ಚೀಟಿಯಲ್ಲಿ ಮತಗಟ್ಟೆಯ ಕ್ಯೂ.ಆರ್.ಕೋಡ್ ಸಹ ಒಳಗೊಂಡಿರುತ್ತದೆ. ನಗರ, ಪಟ್ಟಣ ಪ್ರದೇಶದಲ್ಲಿ ಇದರಿಂದ ಯಾವುದೇ ಗೊಂದಲ, ಸ್ಥಳದ ವಿಳಾಸ ಅರಿಯಲು ಸಮಸ್ಯೆಯಾಗುವುದಿಲ್ಲ ಎಂದ ಅವರು ಆರೋಗ್ಯಯುತ ಪ್ರಜಾಪ್ರಭುತ್ವಕ್ಕೆ ಮತದಾನವೇ ಆಸರೆಯಾಗಿದ್ದು ಎಲ್ಲರೂ ಮತದಾನದಲ್ಲಿ ತಪ್ಪದೇ ಭಾಗವಹಿಸಬೇಕೆಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿ ಸೈಯ್ಯದಾ ಆಫ್ರೀನ್ ಭಾನು ಎಸ್.ಬಳ್ಳಾರಿ, ಪಾಲಿಕೆ ಆಯುಕ್ತರಾದ ರೇಣುಕಾ, ಆಫೀಸರ್ಸ್ ಕ್ಲಬ್ ಕಾರ್ಯದರ್ಶಿ ಡಾ; ಚಂದ್ರಶೇಖರ್ ಸುಂಕದ್, ಖಜಾಂಚಿ ಡಾ; ಮುರುಳೀಧರ್, ಯೋಗ ಗುರುಗಳಾದ ಪರಶುರಾಂ, ಮಹದೇವಪ್ಪ, ಅನಿಲ್ ರಾಯ್ಕರ್ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು. ಯೋಗಪಟುಗಳಾದ ಕುಮಾರಿ ನಮಿತ ಮತ್ತು ಸೃಷ್ಟಿ ಮೈನವಿರೇಳಿಸುವಂತಹ ಯೋಗಾಸನ ಮಾಡಿದರು. ಯೋಗ ಒಕ್ಕೂಟದ ಅಧ್ಯಕ್ಷರಾದ ವಾಸುದೇವ ರಾಯ್ಕರ್ ಸ್ವಾಗತಿಸಿದರು.



