ದಾವಣಗೆರೆ: 11ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆ; ದೈಹಿಕ, ಸಾಮಾಜಿಕ, ಪರಿಸರ ಕಾಳಜಿ ಒಳಗೊಂಡ ವಿಜ್ಞಾನವೇ ಯೋಗ; ಸಂಸದೆ

Dvgsuddi
By
Dvgsuddi
ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ....
2 Min Read

ದಾವಣಗೆರೆ: ದೈಹಿಕ, ಸಾಮಾಜಿಕ ಆರೋಗ್ಯ ಮತ್ತು ಪರಿಸರದ ಬಗ್ಗೆ ಕಾಳಜಿವುಳ್ಳ ವಿಜ್ಞಾನ ಯಾವುದಾದರೂ ಇದ್ದರೆ ಅದುವೇ ಯೋಗ ಎಂದು ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ಅಭಿಪ್ರಾಯಪಟ್ಟರು.

ನಗರದ ಹೈಸ್ಕೂಲ್ ಮೈದಾನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಾನಗರದ ಪಾಲಿಕೆ ಹಾಗೂ ವಿವಿಧ ಯೋಗ ಸಂಘ – ಸಂಸ್ಥೆಗಳ ಸಹಯೋಗದೊಂದಿಗೆ ಆಯೋಜಿಸಲಾಗಿದ್ದ 11 ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಒಂದು ಭೂಮಿ, ಒಂದು ಆರೋಗ್ಯಕ್ಕಾಗಿ ಯೋಗ ಎಂಬ ಘೋಷವಾಕ್ಯದೊಂದಿಗೆ 11ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಆಚರಿಸಲಾಗುತ್ತಿದೆ. ಮನಸ್ಸು ಮತ್ತು ದೇಹವನ್ನು ಸಮತೋಲನದಲ್ಲಿರಿಸುವ ಪ್ರಾಚೀನ ಕಾಲದಲ್ಲಿಯೇ ಯೋಗ ಅಳವಡಿಸಿಕೊಂಡಿದೆ. ದೈನಂದಿನ ಜೀವನದಲ್ಲಿ ಪ್ರತಿಯೊಬ್ಬರೂ ಯೋಗ ಮಾಡುವುದರಿಂದ ರೋಗದಿಂದ ಮುಕ್ತಿ ದೊರೆಯಲಿದೆ. ಯೋಗದಿಂದ ಶಿಸ್ತುಬದ್ದ ಜೀವನ,ಏಕಾಗ್ರತೆ ಸಾಧ್ಯ. ಯೋಗವೆಂದರೆ ಕೇವಲ ದೇಹದ ಕಸರತ್ತು ಮಾತ್ರವಲ್ಲ, ಅದು ದೇಹ, ಮನಸ್ಸು ಹಾಗೂ ಆತ್ಮದ ಸಂಗಮ. ಭಾರತವು ಯೋಗದ ಜನ್ಮಭೂಮಿ, ಆದರೆ ಇಂದು ಜಗತ್ತೇ ಇದನ್ನು ಗುರುತಿಸಿ, ಸ್ವೀಕರಿಸಿ, ಅನುಸರಿಸುತ್ತಿರುವುದು ನಮಗೆ ಹೆಮ್ಮೆ.
ಪ್ರಸ್ತುತ ಪ್ರತಿಯೊಬ್ಬರೂ ಮೊಬೈಲ್, ಟಿವಿಗಳಂತಹ ಮಾಧ್ಯಮಗಳಲ್ಲಿ ಮುಳುಗಿ ದೈಹಿಕ ಮತ್ತು ಮಾನಸಿಕ ಒತ್ತಡಗಳಿಗೆ ಸಿಲುಕಿ ರಕ್ತದೊತ್ತಡ, ಸ್ಥೂಲಕಾಯ ಇನ್ನಿತರೆ ಖಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ. ಆದುದರಿಂದ ಪ್ರತಿದಿನ ಯೋಗ, ಧ್ಯಾನ, ಪ್ರಾಣಯಾಮ ಅಭ್ಯಾಸ ಮಾಡುವುದರಿಂದ ದೈಹಿಕ, ಮಾನಸಿಕ ಒತ್ತಡಗಳನ್ನು ಸುಧಾರಿಸುವುದರೊಂದಿಗೆ ಶಿಸ್ತು, ಏಕಾಗ್ರತೆ, ನಮ್ರತೆ ವೃದ್ಧಿಯಾಗುತ್ತದೆ. ಅಲ್ಲದೇ ಇದರಿಂದ ಚಂಚಲ ಮನಸ್ಥಿತಿಯನ್ನು ಹತೋಟಿಯಲ್ಲಿಡಬಹದು. ಈ ಯೋಗ, ಪ್ರಾಣಯಾಮ, ಧ್ಯಾನ ತಮ್ಮ ಜೀವನದಲ್ಲಿ ನಿರಂತರವಾಗಿ ಅಳವಡಿಸಿಕೊಂಡಲ್ಲಿ ಆಧ್ಯಾತ್ಮಿಕ, ಶೈಕ್ಷಣಿಕ ಇನ್ನಿತರೆ ಕ್ಷೇತ್ರಗಳಲ್ಲಿ ಅಗಾಧ ಸಾಧನೆ ಮಾಡಲು ಸಾಧ್ಯ. ಆದ್ದರಿಂದ ಪ್ರತಿದಿನ ಯೋಗಾಭ್ಯಾಸ ಮಾಡುವುದರೊಂದಿಗೆ ಇತರರಿಗೂ ಅಭ್ಯಾಸಿಸುವಂತೆ ಪ್ರೇರೇಪಿಸಬೇಕು. ಗ್ರಾಮೀಣ ಭಾಗದಲ್ಲಿಯೂ ಸಹ ಮಾಸಿಕ ಒಂದು ಗ್ರಾಮದಂತೆ ಪ್ರತಿ ಗ್ರಾಮಗಳಲ್ಲಿ ಯೋಗ ತರಬೇತಿ ನೀಡುವ ವ್ಯವಸ್ಥೆ ಮಾಡಬೇಕು. ಇದರಿಂದ ಗ್ರಾಮೀಣ ಭಾಗದ ಜನತೆಯ ಒತ್ತಡಗಳನ್ನು ನಿವಾರಿಸುವ ಮುಖೇನ ಗ್ರಾಮೀಣ ಭಾಗಕ್ಕೂ ಯೋಗ ಪರಿಚಯಿಸಬೇಕಿದೆ ಎಂದರು.

ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ ಮಾತನಾಡಿ, ಯೋಗ ಪ್ರಾಣಯಾಮದಿಂದ ಆರೋಗ್ಯವನ್ನು ಸಮತೋಲಿತವಾಗಿಡಬಹುದು. ತದೇಕಚಿತ್ತದಿಂದ ಕನಿಷ್ಠ 15 ರಿಂದ 20 ನಿಮಿಷಗಳ ಕಾಲ ಧ್ಯಾನ, ಯೋಗ ಮಾಡುವುದರಿಂದ ಸಾಕಷ್ಟು ಒತ್ತಡಗಳನ್ನು ನಿವಾರಿಸುವುದರೊಂದಿಗೆ ಮಾನಸಿಕವಾಗಿ ಹಿಡಿತ ಸಾಧಿಸಬಹುದು. ಯೋಗ ಪ್ರಾಣಯಾಮ ಮತ್ತು ಧ್ಯಾನವನ್ನು ಜೀವನದಲ್ಲಿ ಅಳವಡಿಸಿಕೊಂಡಲ್ಲಿ ಆರೋಗ್ಯವಾಗಿ ಶಾಂತಿ, ನೆಮ್ಮದಿಯ ಜೀವನ ನಡೆಸಬಹುದು ಎಂದರು.

ಜಿ. ಪಂ. ಸಿಇಓ ಗಿಟ್ಟೆ ಮಾದವ ರಾವ್ ಮಾತನಾಡಿ, ಶಿಕ್ಷಣ, ಇನ್ನಿತರೆ ಒತ್ತಡಗಳಲ್ಲಿ ಸಿಲುಕಿಕೊಂಡರೂ ವೈಯಕ್ತಿಕವಾಗಿ ಯೋಗವನ್ನು ಜೀವನದಲ್ಲಿ ಅಳವಡಿಸಿಕೊಂಡ ಕಾರಣ ಇಂದು ಅಧಿಕಾರಿಯಾಗಿ ನಿಂತಿದ್ದೇನೆ. ಗ್ರಾಮ ಪಂಚಾಯಿತಿಗಳ ಪಿಡಿಓ ಹಾಗೂ ಗ್ರಾಮ ಲೆಕ್ಕಾಧಿಕಾರಿಗಳನ್ನು ಬಳಸಿಕೊಂಡು ಗ್ರಾಮೀಣ ಹಂತದಲ್ಲಿ ಕೂಡ ಯೋಗ ತರಬೇತಿ ನೀಡಲು ಕ್ರಮ ಕೈಗೊಳ್ಳಲಾಗುವುದು ಎಂದರು.
ಜಿಲ್ಲಾ ಆಯುಷ್ ಅಧಿಕಾರಿ ಡಾ: ಯೋಗೇಂದ್ರ ಕುಮಾರ್ ಸ್ವಾಗತಿಸಿದರು. ಯೋಗ ಗುರುವೈದ್ಯಶ್ರೀ ಜ್ಯೋತಿ ಚನ್ನಬಸವಣ್ಣ ಯೋಗ ತರಬೇತಿ ನೀಡಿದರು.

ಈ ವೇಳೆ ಪೊಲೀಸ್ ವರಿಷ್ಠಾಧಿಕಾರಿ ಉಮಾಪ್ರಶಾಂತ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಮಂಜುನಾಥ್, ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ನಾಗರಾಜ್, ನಗರಾಭಿವೃದ್ಧಿ ಯೋಜನಾ ನಿರ್ದೇಶಕ ಮಹಂತೇಶ್, ಸೇರಿದಂತೆ ವಿವಿಧ ಇಲಾಖೆ ಜಿಲ್ಲಾ ಮಟ್ಟದ ಅಧಿಕಾರಿಗಳು, ವಿವಿಧ ಯೋಗ ಸಂಘ ಸಂಸ್ಥೆಯ ಸದಸ್ಯರು ಮತ್ತು ವಿವಿಧ ಶಾಲಾ ಕಾಲೇಜು ವಿದ್ಯಾರ್ಥಿಗಳು ಇದ್ದರು.

Share This Article
Follow:
ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com
Leave a Comment

Leave a Reply

Your email address will not be published. Required fields are marked *