ದಾವಣಗೆರೆ: ಶ್ರೀ ಚೌಡೇಶ್ವರಿ ದೇವಿಯ ಜಾತ್ರಾ ಮಹೋತ್ಸವದ ಅಂಗವಾಗಿ ದಿನಾಂಕ ಶನಿವಾರ ಸಂಜೆ 7 ಘಂಟೆಗೆ ದಾವಣಗೆರೆಯ ವಿನೋಬ ನಗರದಲ್ಲಿರುವ ಶ್ರೀ ಚೌಡೇಶ್ವರಿ ದೇವಸ್ಥಾನದಲ್ಲಿ ದಾವಣಗೆರೆಯ ಯಕ್ಷಸೌರಭ ಯಕ್ಷಗಾನ ಸಂಸ್ಥೆಯ ಕಲಾವಿದರಿಂದ “ಮಹಿಷ ಮರ್ಧಿನಿ” ಎಂಬ ಪೌರಾಣಿಕ ಪುಣ್ಯ ಕಥಾನಕದ ಯಕ್ಷಗಾನ ಪ್ರದರ್ಶನ ಏರ್ಪಡಿಸಲಾಗಿದೆ ಎಂದು ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಕೆ.ರಾಘವೇಂದ್ರ ನಾಯರಿ ಹೇಳಿದ್ದಾರೆ.
ಶ್ರೀ ಚೌಡೇಶ್ವರಿ ದೇವಸ್ಥಾನದ ಆಡಳಿತ ಮಂಡಳಿ ಹಾಗೂ ಅಧ್ಯಕ್ಷರಾದ ಶ್ರೀನಿವಾಸ ದಾಸಕರಿಯಪ್ಪ ಅವರ ಸಹಕಾರ ಹಾಗೂ ಪ್ರೋತ್ಸಾಹದೊಂದಿಗೆ ದೇಶ ವಿದೇಶಗಳಲ್ಲಿ ಪ್ರಖ್ಯಾತವಾದ ನಮ್ಮ ನಾಡಿನ ಹೆಮ್ಮೆಯ ಯಕ್ಷಗಾನ ಕಲೆಯ ಪ್ರದರ್ಶನ ದಾವಣಗೆರೆಯ ವಿನೋಬನಗರದ ಒಂದನೇ ಮುಖ್ಯ ರಸ್ತೆಯ ಹತ್ತನೇ ಅಡ್ಡ ರಸ್ತೆಯಲ್ಲಿರುವ ಶ್ರೀ ಚೌಡೇಶ್ವರಿ ದೇವಸ್ಥಾನದ ಮುಂಭಾಗ ನಡೆಯಲಿದೆ.
ಯಕ್ಷಸೌರಭ ಯಕ್ಷಗಾನ ಸಂಸ್ಥೆಯ ಸಂಸ್ಥಾಪಕರು ಮತ್ತು ಯಕ್ಷಗುರುಗಳಾದ ಕರ್ಜೆ ಸೀತಾರಾಮ ಆಚಾರ್ಯರ ನಿರ್ದೇಶನದಲ್ಲಿ ನಡೆಯಲಿರುವ ಈ ಯಕ್ಷಗಾನ ಪ್ರದರ್ಶನದ ಹಿಮ್ಮೇಳದಲ್ಲಿ ಭಾಗವತರಾಗಿ ನವೀನ್ ಕೋಟ, ಮದ್ದಳೆವಾದಕರಾಗಿ ಕೃಷ್ಣ ಗಿಳಿಯಾರು, ಚಂಡೆವಾದಕರಾಗಿ ಮಹೇಶ್ ಬಿದ್ಕಲಕಟ್ಟೆ ಹಾಗೂ ಮುಮ್ಮೇಳದಲ್ಲಿ ಪಾತ್ರಧಾರಿಗಳಾಗಿ ಸಿ.ಅಮೂಲ್ಯ, ಅನಘ ಉಪಾಧ್ಯ, ಹರ್ಷಿತಾ ಪ್ರಸಾದ, ಮಾನ್ಯಶ್ರೀ, ಅನಿರುದ್ಧ ಉಪಾಧ್ಯ, ಸಹನಾ ಸೇರಿಗಾರ್, ಶ್ರೀನಿವಾಸ ಉಪಾಧ್ಯ, ರೋಹಿತ್ ಹಾಗೂ ಶ್ರೀಲಕ್ಷ್ಮಿ ಇರಲಿದ್ದಾರೆ ಎಂದು ಸಂಸ್ಥೆಯ ಅಧ್ಯಕ್ಷರಾದ ರಾಜಶೇಖರ ಸಕ್ಕಟ್ಟು ಅವರು ಮಾಹಿತಿ ನೀಡಿದ್ದಾರೆ.
ಶ್ರೀ ದೇವಿಯು ದುಷ್ಟ ರಕ್ಕಸ ಮಹಿಷಾಸುರನ್ನು ಸಂಹರಿಸುವ ಕಥಾನಕದ ಈ ಯಕ್ಷಗಾನ ಪ್ರದರ್ಶನಕ್ಕೆ ಚೌಡೇಶ್ವರಿ ದೇವಿಯ ಭಕ್ತರು, ಯಕ್ಷಗಾನ ಕಲಾ ಪ್ರೇಮಿಗಳು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕ್ರಮಕ್ಕೆ ಆಗಮಿಸಬೇಕಾಗಿ ಯಕ್ಷಸೌರಭ ಯಕ್ಷಗಾನ ಸಂಸ್ಥೆಯ ಗೌರವ ಸಲಹೆಗಾರ ಶ್ರೀಕಾಂತ್ ಭಟ್ ಅವರು ಕೋರಿದ್ದಾರೆ.