ದಾವಣಗೆರೆ: ಕೊರೊನಾ ಮತ್ತು ರೂಪಾಂತರಿ ಓಮೈಕ್ರಾನ್ ನಿಯಂತ್ರಣಕ್ಕಾಗಿ ರಾಜ್ಯ ಸರ್ಕಾರ ವೀಕೆಂಡ್ ಕರ್ಫ್ಯೂ ಘೋಷಣೆ ಮಾಡಿದೆ. ಅಗತ್ಯ ವಸ್ತುಗಳ ಶಾಪ್ ಹೊರತುಪಡಿಸಿ, ಉಳಿದ ಎಲ್ಲಾ ಅಂಗಡಿಗಳು ಮುಚ್ಚುವ ಮೂಲಕ ದಾವಣಗೆರೆಯಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ನಿನ್ನೆ ರಾತ್ರಿ(ಶುಕ್ರವಾರ) ರಾತ್ರಿಯಿಂದ ವೀಕೆಂಡ್ ಕರ್ಫ್ಯೂ ಜಾರಿಯಲಿದ್ದು, ಸೋಮವಾರ ಬೆಳಿಗ್ಗೆ 5 ಗಂಟೆಯ ವರೆಗೆ ಮುಂದುವರಿಯಲಿದೆ. ಕರ್ಫ್ಯೂನಿಂದ ಎಲ್ಲಾ ರಸ್ತೆಗಳು ಖಾಲಿ ಖಾಲಿ ಕಾಣುತ್ತಿರುವ ದೃಶ್ಯ ಸಮಾನ್ಯವಾಗಿತ್ತು. ಒಂದು ರೀತಿ ಬಂದ್ ವಾತಾವರಣ ಉಂಟಾಗಿತ್ತು.
ಅಗತ್ಯ ಸೇವೆಗಳಾದ ಆಸ್ಪತ್ರೆ, ಔಷಧ ಅಂಗಡಿ, ದಿನಸಿ ಅಂಗಡಿ, ಹೋಟೆಲ್, ಬೇಕರಿ, ಹಾಲಿನ ಡೈರಿ, ತರಕಾರಿ ಮತ್ತು ಹಣ್ಣುಗಳ ಮಾರಾಟ ಪ್ರತಿ ದಿನದಂತೆ ನಡೆದಿತ್ತು. ಹೋಟೆಲ್, ಬೇಕರಿಗಳಲ್ಲಿ ಪಾರ್ಸೆಲ್‌ಗೆ ಅವಕಾಶ ಕಲ್ಪಿಸಲಾಗಿತ್ತು. ಬಟ್ಟೆ, ಚಿನ್ನಾಭರಣ ಸೇರಿದಂತೆ ಎಲ್ಲಾ ಅಂಗಡಿಗಳು ಬಂದ್ ಆಗಿದ್ದವು. ಮಾರುಕಟ್ಟೆ ಪ್ರದೇಶಗಳಾದ ಕೆ.ಆರ್.ಮಾರುಕಟ್ಟೆ, ಗಡಿಯಾರ ಕಂಬ ಮಾರುಕಟ್ಟೆ ಕ್ಲೋಸ್ ಆಗಿದ್ದವು. ತರಕಾರಿ, ಹಣ್ಣುಗಳನ್ನು ತಳ್ಳುವ ಗಾಡಿಯಲ್ಲಿ ಮಾರಲು ಅವಕಾಶವಿದೆ. ಇನ್ನು ಬಸ್, ಆಟೊ ಸಂಚಾರಕ್ಕೆ ಅವಕಾಶ ಕಲ್ಪಿಸಿದ್ದರೂ, ಜನರು ಇಲ್ಲದೆ ಖಾಲಿ ಖಾಲಿ ಓಡಾಡುತ್ತಿದ್ದವು. ನಗರದ ಶ್ರೀದುರ್ಗಾಂಭಿಕಾ ದೇವಸ್ಥಾನ, ವೀರಭದ್ರೇಶ್ವರಸ್ವಾಮಿ ದೇವಸ್ಥಾನ, ಬಕ್ಕೇಶ್ವರ ದೇವಸ್ಥಾನ ಸೇರಿದಂತೆ ಬಹುತೇಕ ದೇವಸ್ಥಾನಗಳು ಬಂದ್ ಆಗಿದ್ದವು.



