ದಾವಣಗೆರೆ: ನಾಡಹಬ್ಬ ವಿಜಯದಶಮಿಯ ಅಂಗವಾಗಿ ವಿಶ್ವ ಹಿಂದೂ ಪರಿಷತ್, ಸಾರ್ವಜನಿಕ ವಿಜಯದಶಮಿ ಮಹೋತ್ಸವ ಸಮಿತಿ ಹಾಗೂ ಹಿಂದೂ ಪರ ಸಂಘಟನೆಗಳ ನೇತೃತ್ವದಲ್ಲಿ ನಗರದಲ್ಲಿಂದು ಬೃಹತ್ ಶೋಭಾಯಾತ್ರೆಯನ್ನು ವಿಜೃಂಭಣೆಯಿಂದ ಆಚರಿಸಲಾಯಿತು.
ಬೇತೂರು ರಸ್ತೆಯ ವೆಂಕಟೇಶ ವೃತ್ತದಲ್ಲಿ ಜಡೇ ಸಿದ್ದೇಶ್ವರ ಮಠದ ಶಿವಾನಂದ ಸ್ವಾಮೀಜಿ ಶೋಭಾಯಾತ್ರೆಗೆ ಚಾಲನೆ ನೀಡಿದರು.
ಯಾತ್ರೆಯು ಬಂಬೂ ಬಜಾರ್ ರಸ್ತೆ, ಶಾಂತಿ ಚಿತ್ರಮಂದಿರ ರಸ್ತೆ, ಎಕ್ಸ್ ಮುನ್ಸಿಪಲ್ ಕಾಲೇಜು, ಕೆ.ಆರ್.ಮಾರುಕಟ್ಟೆ, ಬೆಳ್ಳೂಡಿಗಲ್ಲಿ ಮೂಲಕ ಕಾಳಿಕಾ ದೇವಿ ರಸ್ತ ಮೂಲಕ ಸಾಗಿ ಸಂಜೆ ವೇಳೆಗೆ ಅಂತಿಮವಾಗಿ ಪಿಬಿ ರಸ್ತೆಯ ಶ್ರೀ ಬೀರಲಿಂಗೇಶ್ವರ ದೇವಸ್ಥಾನಕ್ಕೆ ತಲುಪಿತು.
ಮಾಜಿ ಸಚಿವರಾದ ಎಂ.ಪಿ. ರೇಣುಕಾಚಾರ್ಯ, ಎಸ್.ಎ. ರವೀಂದ್ರ ನಾಥ್, ಡಾ. ಎ.ಎಚ್. ಶಿವಯೋಗಿಸ್ವಾಮಿ, ಮೇಯರ್ ಬಿ.ಎಚ್. ವಿನಾಯಕ ಪೈಲ್ವಾನ್, ಮಾಜಿ ಮೇಯರ್ ಗಳಾದ ಬಿ.ಜೆ ಅಜಯ್ ಕುಮಾರ್, ಎಸ್ ಟಿ. ವೀರೇಶ್, ರಾಜನಹಳ್ಳಿ ಶಿವಕುಮಾರ್, ನಗರ ಸಂಚಾಲಕ ಕೆ.ಆರ್. ಮಲ್ಲಿ ಕಾರ್ಜುನ್, ಎನ್.ರಾಜಶೇಖರ್, ಧನುಷ್, ಶ್ರೀನಿವಾಸ್ ದಾಸಕರಿಯಪ್ಪ, ರಾಕೇಶ್, ಕೆ.ಬಿ. ಶಂಕರನಾರಾಯಣ, ವೈ. ಮಲ್ಲೇಶ್ ಇತರರು ಭಾಗವಹಿಸಿದ್ದರು.
ಮೆರವಣಿಗೆಯಲ್ಲಿ ಭಾರತಮಾತೆ, ಶ್ರೀ ಚಾಮುಂಡೇಶ್ವರಿ, ಶ್ರೀ ದುರ್ಗಾಂಬಿಕಾದೇವಿ, ವಿವೇಕಾನಂದ, ಛತ್ರಪತಿ ಶಿವಾಜಿ, ವೀರ ಸಾವರ್ಕರ್, ಕೆಂಪೇಗೌಡ, ರಾಮಮಂದಿರ, ಅಮರ್ ಜವಾನ್, ಭಾರತಾಂಬೆ, ಗೋರಕ್ಷಣೆ, ಭಾರತೀಯ ಸೈನಿಕರು, ಬುದ್ಧ, ಬಸವ, ಅಂಬೇಡ್ಕರ್, ವಾಲ್ಮೀಕಿ, ಕನಕದಾಸ, ಭಗತ್ ಸಿಂಗ್, ಸುಭಾಷ್ ಚಂದ್ರಬೋಸ್, ಕಿತ್ತೂರು ರಾಣಿ ಚನ್ನಮ್ಮ ಇತರರ ಭಾವಚಿತ್ರ, ಸ್ತಬ್ಧ ಚಿತ್ರಗಳಿದ್ದವು. ಡೊಳ್ಳು, ಸಮಾಳ, ನಂದಿಕೋಲು, ವೀರಗಾಸೆ, ಗೊರವರ ಕುಣಿತ, ಇತರೆ ಕಲಾತಂಡಗಳು ನೋಡುಗರ ಗಮನ ಸೆಳೆದವು.
ಮುಸ್ಲಿಂ ಸಮುದಾಯದ ಮುಖಂಡರಾದ ದಾದುಸೇಠ್, ಕೆ. ಚಮನ್ ಸಾಬ್ ಇತರರು ಮಾಜಿ ಶಾಸಕರಾದ ರವೀಂದ್ರನಾಥ್, ಡಾ. ಶಿವಯೋಗಿ ಸ್ವಾಮಿ, ಹಿಂದೂ ಸಮಾಜದ ಇತರ ಮುಖಂಡರಿಗೆ ಸನ್ಮಾನಿಸಿದರು.ಯಾವುದೇ ಅಹಿತಕರ ಘಟನೆ ನಡೆಯದಂತೆ ಜಿಲ್ಲಾ ಪೊಲೀಸ್ ಬಂದೋಬಸ್ತ್ ಹಮ್ಮಿಕೊಳ್ಳಲಾಗಿತ್ತು.



