ದಾವಣಗೆರೆ: ಅತಿಥಿ ಉಪನ್ಯಾಸಕರೊಬ್ಬರು ವಿದ್ಯಾರ್ಥಿನಿಯನ್ನು ತನ್ನ ಬೆನ್ನಿನ ಮೇಲೆ ಕೂರಿಸಿಕೊಂಡು ಭರ್ಜರಿ ಡ್ಯಾನ್ಸ್ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. ಈ ಘಟನೆ ದಾವವಣಗೆರೆ ವಿಶ್ವವಿದ್ಯಾಲಯ ಕ್ಯಾಂಪಸ್ ನಲ್ಲಿಯೇ ನಡೆದಿದ್ದು, ಅಸಭ್ಯ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಭಾರೀ ಸಂಚಲ ಸೃಷ್ಠಿಸಿದೆ.
ದಾವಣಗೆತೆ ಹೊರ ವಲಯದ ತೋಳಹುಣಸೆ ಸಮೀಪದ ಶಿವಗಂಗೋತ್ರಿಯ ದಾವಣಗೆರೆ ವಿವಿ ಕ್ಯಾಂಪಸ್‌ನಲ್ಲಿ ಇತ್ತೀಚೆಗೆ ಅಂತಿಮ ವರ್ಷದ ಬಿಪಿಇಡಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭದಲ್ಲಿ ಈ ಘಟನೆ ನಡೆದಿದೆ. ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಬೇಕಾದ ಅತಿಥಿ ಉಪನ್ಯಾಸಕ ಪಂಪಾಪತಿ ವಿದ್ಯಾರ್ಥಿನಿಯನ್ನು ಬೆನ್ನ ಮೇಲೆ ಕೂರಿಸಿಕೊಂಡು ಡ್ಯಾನ್ಸ್ ಮಾಡಿದ್ದಾರೆ. ಅಷ್ಟೇ ಅಲ್ಲದೆ, ಕೆಲವರು ಅಂಗಿ ಬಿಚ್ಚಿಕೊಂಡು ಬರೀ ಮೈಯಲ್ಲಿ ಡ್ಯಾನ್ಸ್ ಮಾಡಿ ಅಶಿಸ್ತು ತೋರಿರುವ ಘಟನೆಯೂ ನಡೆದಿದೆ.
ಅಸಭ್ಯ ವೀಡಿಯೋ ವೈರಲ್ ಆಗುತ್ತಿದ್ದಂತೆಯೇ ಎಚ್ಚೆತ್ತ ದಾವಣಗೆರೆ ವಿವಿ ಅತಿಥಿ ಬೋಧಕನಿಗೆ ನೋಟಿಸ್ ಜಾರಿ ಮಾಡಿದೆ. ಅತಿಥಿ ಬೋಧಕ ಸಹ ಕ್ಷಮಾಪಣಾ ಪತ್ರ ಬರೆದುಕೊಟ್ಟಿದ್ದು, ಮುಂದೆ ಹೀಗಾಗದಂತೆ ಜಾಗ್ರತೆ ವಹಿಸುವುದಾಗಿ ಹೇಳಿದ್ದಾರೆ ಎನ್ನಲಾಗಿದೆ.



