ದಾವಣಗೆರೆ: ದಾವಣಗೆರೆ ವಿಶ್ವವಿದ್ಯಾಲಯದಲ್ಲಿ ಅಕ್ರಮ ನೇಮಕಾತಿ, ಭ್ರಷ್ಟಾಚಾರ ಆರೋಪ ಕೇಳಿ ಬಂದಿದ್ದು, ಈ ಬಗ್ಗೆ ತನಿಖೆ ನಡೆಸಲು ಉನ್ನತ ಶಿಕ್ಷಣ ಇಲಾಖೆಯ ಸಮಿತಿ ಎಂಟ್ರಿ ಕೊಟ್ಟಿದ್ದಾರೆ. ಈ ಬಗ್ಗೆ ಸಿಂಡಿಕೇಟ್ ಸದಸ್ಯರು ಸಲ್ಲಿಸಿದ್ದರು.
ಇದೀಗ ಉನ್ನತ ಶಿಕ್ಷಣ ಇಲಾಖೆ ಸಮಿತಿಯ ಅಧ್ಯಕ್ಷೆ ಉನ್ನತ ಶಿಕ್ಷಣ ಇಲಾಖೆಯ ಉಪ ಕಾರ್ಯದರ್ಶಿ ಸ್ನೇಹಲ್ ಸುಧಾಕರ ಲೋಖಂಡೆ ಮತ್ತು ಸದಸ್ಯೆ ಮೈಸೂರು ವಿಶ್ವವಿದ್ಯಾಲಯದ ಹಣಕಾಸು ಅಧಿಕಾರಿ ಡಾ.ಸಂಗೀತಾ ಗಜಾನನ ಭಟ್ ಅವರು ದಾವಣಗೆರೆ ವಿ.ವಿ. ಅಧಿಕಾರಿಗಳು ಹಾಗೂ ಆರೋಪ ಮಾಡಿದ್ದ ಸಿಂಡಿಕೇಟ್ ಸದಸ್ಯರಿಂದಲೂ ಮಾಹಿತಿ ಸಂಗ್ರಹಿಸಿದ್ದಾರೆ.
ಉನ್ನತ ಶಿಕ್ಷಣ ಮತ್ತು ಹಣಕಾಸು ಇಲಾಖೆಯ ಒಪ್ಪಿಗೆ ಇಲ್ಲದೆ ಇಬ್ಬರು ಗುತ್ತಿಗೆ ನೌಕರರನ್ನು ಕಾಯಂ ಮಾಡಲಾಗಿತ್ತು. ಇದಲ್ಲದೆ ರಾಜ್ಯ ಸರ್ಕಾರದೊಂದಿಗೆ ಸಮಾಲೋಚಿಸದೇ 10 ಬೋಧಕೇತರ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಿತ್ತು. ಇನ್ನು ಕುಲಪತಿಗಳ ಶೋಧನಾ ಸಮಿತಿಯ ಒಂದು ದಿನದ ಸಭೆಗೆ 8.6 ಲಕ್ಷ ಹೆಚ್ಚುವರಿ ಖರ್ಚು ಹಾಗೂ ಸಿಂಡಿಕೇಟ್‌ನ ಒಪ್ಪಿಗೆ ಪಡೆಯದೆ ನ್ಯಾಕ್ ಮತ್ತು ಘಟಿಕೋತ್ಸವ ಸಂಬಂಧ ಅಂದಾಜು 2 ಕೋಟಿ ವೆಚ್ಚ ಮಾಡಲಾಗಿತ್ತು ಎಂದು ದೂರು ಸಲ್ಲಿಸಲಾಗಿತ್ತು. ಈ ಬಗ್ಗೆ ಉನ್ನತ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಮಾಹಿತಿ ಸಂಗ್ರಹಿಸಿ, ಸರ್ಕಾರಕ್ಕೆ ವರದಿ ಸಲ್ಲಿಸಲಿದ್ದಾರೆ.



