ದಾವಣಗೆರೆ: ದಾವಣಗೆರೆ ವಿಶ್ವ ವಿದ್ಯಾಲಯದಲ್ಲಿ ಇಂದು (ಫೆ.28) ಹತ್ತನೇ ಘಟಿಕೋತ್ಸ ನಡೆಯಿತು. ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಉದ್ಘಾಟಿಸಿ, ವಿದ್ಯಾರ್ಥಿಗಳಿಗೆ 81 ಸ್ವರ್ಣ ಪದಕ, ಪದವಿ, ಸಾತಕೋತ್ತರ ಹಾಗೂ ಪಿಎಚ್ ಡಿ ಪದವಿ ಪ್ರದಾನ ಮಾಡಿದರು. ಇದೇ ವೇಳೆ ವಿವಿಧ ಕ್ಷೇತ್ರಲ್ಲಿ ಸಾಧನೆ ಮಾಡಿದ ಮೂವರಿಗೆ ಗೌರವ ಡಾಕ್ಟರೇಟ್ ಪದವಿ ನೀಡಿ ಗೌರವಿಸಿದರು.
ದಾವಣಗೆರೆ ತಾಲೂಕಿನ ತೋಳಹುಣಸೆ ಗ್ರಾಮದ ಬಳಿಯ ದಾವಣಗೆರೆ ವಿವಿ ಆವರಣದಲ್ಲಿ ಹತ್ತನೇ ಘಟಿಕೋತ್ಸವ ಕಾರ್ಯಕ್ರಮ ಅದ್ಧೂರಿಯಾಗಿ ನಡೆಯಿತು. ಈ ಘಟಿಕೋತ್ಸವದಲ್ಲಿ ವಿದ್ಯಾರ್ಥಿಗಳು ಚಿನ್ನದ ಪದಕಗಳನ್ನು ಮುಡಿಗೇರಿಸಿಕೊಂಡು ಸಂತಸಪಟ್ಟರು. ಈ ವರ್ಷದವೂ ಹೆಣ್ಣು ಮಕ್ಕಳೇ ಅತಿ ಹೆಚ್ಚು ಚಿನ್ನದ ಪದಕಗಳನ್ನು ಪಡೆಯುವ ಮೂಲಕ ಪೋಷಕರಿಗೆ ಕೀರ್ತಿ ತಂದರು. ಇದಲ್ಲದೆ ಪದವಿ, ಸಾತಕೋತ್ತರ ಪದವಿ ಹಾಗೂ ಪಿಎಚ್ ಡಿ ಪದವಿ ವಿತರಿಸಲಾಯಿತು. ಇದೇ ವೇಳೆ ಟಿ.ಎಂ. ಚಂದ್ರಶೇಖರಯ್ಯ, ಅಥಣಿ ಎಸ್ ವೀರಣ್ಣ, ಎಂ.ಎಸ್. ಶಿವಣ್ಣ ಅವರು ಡಾಕ್ಟರೇಟ್ ಪ್ರದಾನ ಮಾಡಲಾಯಿತು.
2021-22 ನೇ ಸಾಲಿನಲ್ಲಿ ಒಟ್ಟು 81 ಸ್ವರ್ಣ ಪದಕಗಳಲ್ಲಿಂದು ಸ್ನಾತಕ ಪದವಿಯಲ್ಲಿ 10 ಮಹಿಳಾ ಹಾಗೂ 01 ಪುರುಷ ವಿದ್ಯಾರ್ಥಿಗಳು ಸೇರಿ ಒಟ್ಟು 14 ವಿದ್ಯಾರ್ಥಿಗಳು 22 ಸ್ವರ್ಣ ಪದಕಗಳನ್ನ ಪಡೆದರು ಹಾಗೂ ಸ್ನಾತಕೋತ್ತರ ಪದವಿಯಲ್ಲಿ 22 ಮಹಿಳಾ ಹಾಗೂ 09 ಪುರುಷ ವಿದ್ಯಾರ್ಥಿಗಳು ಸೇರಿ ಒಟ್ಟು 31 ವಿದ್ಯಾರ್ಥಿಗಳು 59 ಸ್ವರ್ಣ ಪದಕಗಳನ್ನು ಸ್ವೀಕರಿಸಿದರು. ಇನ್ನು ಸ್ನಾತಕ ಮತ್ತು ಸ್ನಾತಕೋತ್ತರ ಪದವಿಗಳಲ್ಲಿ ಒಟ್ಟು 32 ಮಹಿಳಾ ವಿದ್ಯಾರ್ಥಿನಿಗಳು ಹಾಗೂ 13 ಪುರುಷ ವಿದ್ಯಾರ್ಥಿಗಳು ಸೇರಿ ಒಟ್ಟು 45 ವಿದ್ಯಾರ್ಥಿಗಳು 81 ಚಿನ್ನದ ಪದಕಗಳನ್ನು ಹಂಚಿಕೊಂಡರು.10 ಪುರುಷ ವಿದ್ಯಾರ್ಥಿಗಳು ಪಿಹೆಚ್ಡಿ ಪಡೆದರೆ ಇತ್ತ ಕೇವಲ 04 ಜನ ಮಹಿಳಾ ವಿದ್ಯಾರ್ಥಿನಿಯರು ಪಿಹೆಚ್ಡಿ ಪಡೆಯುವಲ್ಲಿ ಸಫಲರಾದ್ರು. ಒಬ್ಬರು ಎಂಫಿಲ್ ಪದವಿಯಲ್ಲಿ ವಿದ್ಯಾರ್ಥಿಗೆ ಪದವಿ ಪ್ರದಾನ ಮಾಡಲಾಯಿತು.
ಪದವಿಗಳನ್ನು ಪಡೆಯುವಲ್ಲಿ ಕೂಡ ಮಹಿಳಾ ವಿದ್ಯಾರ್ಥಿಗಳು ಮೇಲುಗೈ ಸಾಧಿಸಿದ್ದು, 12,179 ಸ್ನಾತಕ ಪದವಿಗಳಲ್ಲಿ 7,219 ವಿದ್ಯಾರ್ಥಿನಿಯರು ಹಾಗೂ 4,960 ವಿದ್ಯಾರ್ಥಿಗಳು ಪದವಿ ಪಡೆದರು. ಇದಲ್ಲದೇ ಸ್ನಾತಕೋತ್ತರ ಪದವಿಗಳನ್ನು ಪಡೆಯುವುದರಲ್ಲೂ ಮಹಿಳಾ ವಿದ್ಯಾರ್ಥಿಗಳು ಹೆಚ್ಚು ಪದವಿಗಳನ್ನು ಸ್ವೀಕರಿಸಿ ಪ್ರಶಂಸೆಗೆ ಪಾತ್ರರಾದರು. ಒಟ್ಟು 1,799 ಪದವಿಗಳಲ್ಲಿ 1,161 ಪದವಿಗಳನ್ನು ಮಹಿಳಾ ವಿದ್ಯಾರ್ಥಿಗಳು ಪಡೆದರೆ, ಇತ್ತ ಪುರುಷ ವಿದ್ಯಾರ್ಥಿಗಳು ಕೇವಲ 638 ಪದವಿಗಳನ್ನು ಸ್ವೀಕರಿಸಿದರು.



