ದಾವಣಗೆರೆ: ಫೆ.28ರಂದು ದಾವಣಗೆರೆ ವಿಶ್ವವಿದ್ಯಾನಿಲಯದ 10ನೇ ಘಟಿಕೋತ್ಸವ ಶಿವಗಂಗೋತ್ರಿ ಕ್ಯಾಂಪಸ್ನಲ್ಲಿ ನಡೆಯಲಿದೆ. ಈ ಬಾರಿಯ ಘಟಿಕೋತ್ಸವದಲ್ಲಿ ಮೂವರಿಗೆ ಗೌರವ ಡಾಕ್ಟರೇಟ್ ಪದವಿ, 81 ಸ್ವರ್ಣ ಪದಕ,13,978 ಪದವಿ, ಸ್ನಾತಕೋತ್ತರ ಪದವಿ ಪ್ರದಾನ ಮಾಡಲಾಗುವುದು ಎಂದು ಉಪ ಕುಲಪತಿ ಬಿ.ಡಿ.ಕುಂಬಾರ ತಿಳಿಸಿದ್ದಾರೆ.
ಸುದ್ದಿಗಾರರಿಗೆ ಈ ಬಗ್ಗೆ ಮಾಹಿತಿ ನೀಡಿದ ಅವರು, ದಾವಣಗೆರೆ ವಿ.ವಿ. ಹತ್ತನೇ ಘಟಿಕೋತ್ಸವದಲ್ಲಿ ರಾಜ್ಯಪಾಲರು ಹಾಗೂ ಕುಲಾಧಿಪತಿ ಥಾವರ್ ಚಂದ್ ಗೆಹ್ಲೋಟ್ ಅಧ್ಯಕ್ಷತೆ ವಹಿಸಲಿದ್ದು, ಉನ್ನತ ಶಿಕ್ಷಣ ಸಚಿವ ಡಾ. ಸಿ.ಎನ್. ಅಶ್ವತ್ಥನಾರಾಯಣ ಕಾರ್ಯಕ್ರಮದಲ್ಲಿ ಭಾಗಿಯಾಲಿದ್ದಾರೆ, ಇದಲ್ಲದೆ ಮುಖ್ಯ ಅತಿಥಿಗಳಾಗಿ ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿ (ಎಐಸಿಟಿಇ) ಪ್ರೊ. ಟಿ. ಜಿ. ಸೀತಾರಾಮ್ ಭಾಗವಹಿಸಲಿದ್ದಾರೆ. ಈ ಬಾರಿ ಘಟಿಕೋತ್ಸವದಲ್ಲಿ ಟಿ.ಎಂ. ರಾಜಶೇಖರಯ್ಯ, ಅಥಣಿ ಎಸ್ ವೀರಣ್ಣ, ಎಂ.ಎಸ್. ಶಿವಣ್ಣ ಅವರು ಡಾಕ್ಟರೇಟ್ ಪದವಿಗೆ ಭಾಜನರಾಗಿದ್ದಾರೆ.
ಘಟಿಕೋತ್ಸವದಲ್ಲಿ ಒಬ್ಬರು ಮಾಸ್ಟರ್ ಆಫ್ ಫಿಲಾಸಫಿ (ಎಂ.ಫಿಲ್) ಮತ್ತು ನಾಲ್ಕು ಮಂದಿ ಮಹಿಳೆರು ಹಾಗೂ ಹತ್ತು ಮಂದಿ ಪುರುಷರು ಸೇರಿ ಒಟ್ಟು 14 ಜನರು ಡಾಕ್ಟರ್ ಆಫ್ ಫಿಲಾಸಫಿ (ಪಿ.ಹೆಚ್.ಡಿ) ಪದವಿ ಸ್ವೀಕರಿಸಲಿದ್ದಾರೆ. 2021-22ನೇ ಸಾಲಿನ ಸ್ನಾತಕ ಪದವಿಯನ್ನು 7,219 ವಿದ್ಯಾರ್ಥಿನಿಯರು ಹಾಗೂ 4,900 ವಿದ್ಯಾರ್ಥಿಗಳು ಸೇರಿ ಒಟ್ಟು 12,179 ವಿದ್ಯಾರ್ಥಿಗಳು ಸ್ವೀಕರಿಸಲಿದ್ದಾರೆ ಎಂದು ಉಪ ಕುಲಪತಿ ಬಿ ಡಿ ಕುಂಬಾರ ತಿಳಿಸಿದರು.
2021-22ನೇ ಸಾಲಿನ ಸ್ನಾತಕೋತ್ತರ ಪದವಿಗಳಲ್ಲಿ 1,161 ವಿದ್ಯಾರ್ಥಿನಿಯರು ಹಾಗೂ 638 ವಿದ್ಯಾರ್ಥಿಗಳು ಸೇರಿ ಒಟ್ಟು 1,700 ವಿದ್ಯಾರ್ಥಿಗಳು ಸ್ನಾತಕೋತ್ತರ ಪದವಿ ಪಡೆಯಲಿದ್ದು, ಸ್ನಾತಕ ಮತ್ತು ಸ್ನಾತಕೋತ್ತರ ಪದವಿಗಳು ಸೇರಿ ಒಟ್ಟು 13,978 ವಿದ್ಯಾರ್ಥಿಗಳು ಪದವಿ ಪಡೆಯಲಿದ್ದಾರೆ. ಈ ಬಾರಿ ಒಟ್ಟು 81 ಸ್ವರ್ಣ ಪದಕಗಳನ್ನು ನೀಡಲಾಗುವುದು. ಸ್ನಾತಕ ಪದವಿಯಲ್ಲಿ 10 ವಿದ್ಯಾರ್ಥಿನಿಯರು ಹಾಗೂ ನಾಲ್ಕು ವಿದ್ಯಾರ್ಥಿಗಳಿಗೆ ಸೇರಿ ಒಟ್ಟು 14 ವಿದ್ಯಾರ್ಥಿಗಳು 22 ಸ್ವರ್ಣ ಪದಕಗಳನ್ನು ಪಡೆಯಲಿದ್ದಾರೆ. ಹಾಗೂ ಸ್ನಾತಕೋತ್ತರ ಪದವಿಯಲ್ಲಿ 22 ವಿದ್ಯಾರ್ಥಿನಿಯರು ಹಾಗೂ 9 ವಿದ್ಯಾರ್ಥಿಗಳು ಸೇರಿ ಒಟ್ಟು 31 ವಿದ್ಯಾರ್ಥಿಗಳು 59 ಸ್ವರ್ಣ ಪದಕಗಳನ್ನು ಪಡೆಯಲಿದ್ದಾರೆ.
ಸ್ನಾತಕ ಮತ್ತು ಸ್ನಾತಕೋತ್ತರ ಪದವಿಗಳಲ್ಲಿ ಒಟ್ಟು 32 ವಿದ್ಯಾರ್ಥಿನಿರು ಹಾಗೂ 13 ವಿದ್ಯಾರ್ಥಿಗಳು ಸೇರಿ ಒಟ್ಟು 45 ವಿದ್ಯಾರ್ಥಿಗಳು 81 ಚಿನ್ನದ ಪದಕಗಳನ್ನು ಪಡೆದುಕೊಳ್ಳಲಿದ್ದಾರೆ. ಈ ಸಾಲಿನಲ್ಲಿ ವಾಣಿಜ್ಯಶಾಸ್ತ್ರ (ಎಂ.ಕಾಂ) ವಿಭಾಗದ ಹಾಲಮ್ಮ ಬಿ, 5 ಹಾಗೂ ಜೀವರಸಾಯನಶಾಸ್ತ್ರ 5 ಸ್ವರ್ಣ ಪದಕಗಳನ್ನು ಪಡೆಯಲಿದ್ದಾರೆ. 2021-22ನೇ ಶೈಕ್ಷಣಿಕ ವರ್ಷದಲ್ಲಿ ಸ್ನಾತಕ ಪದವಿಯಲ್ಲಿ ಶೇ 73.22% ಹಾಗೂ ಸ್ನಾತಕೋತ್ತರ ಪದವಿಯಲ್ಲಿ ಶೇ 96.82% ಫಲಿತಾಂಶ ಬಂದಿದೆ ಎಂದು ವಿವರಿಸಿದರು.