ದಾವಣಗೆರೆ: ಕೇಂದ್ರ ಸರ್ಕಾರ ಮಂಡಿಸಿದ ಬಜೆಟ್‍ನಲ್ಲಿ ರಾಜ್ಯಕ್ಕೆ ಏನನ್ನು ನೀಡದೇ ಜನತೆಗೆ ದ್ರೋಹ ಬಗೆದಿದ್ದಾರೆ. ಈ ಬಾರಿಯ ಬಜೆಟ್ ನಲ್ಲಿ ಕರ್ನಾಟಕಕ್ಕೆ ಚೊಂಬು ಕೊಟ್ಟಿದ್ದಾರೆ ಎಂದು ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವಎಸ್.ಎಸ್.ಮಲ್ಲಿಕಾರ್ಜುನ್ ಮತ್ತು ಶಾಸಕ ಡಾ. ಶಾಮನೂರು ಶಿವಶಂಕರಪ್ಪ ಕಿಡಿಕಾರಿದ್ದಾರೆ.
ಕೇಂದ್ರ ಬಜೆಟ್‍ಗೆ ಸಂಬಂಧಿಸಿದಂತೆ ಪತ್ರಿಕಾ ಪ್ರಕಟಣೆ ನೀಡಿರುವ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಗಳವಾರ ಲೋಕಸಭೆಯಲ್ಲಿ ಮಂಡಿಸಿದ 2024-25ನೇ ಸಾಲಿನ ಬಜೆಟ್ ನಲ್ಲಿ ಕರ್ನಾಟಕಕ್ಕೆ ಚೊಂಬು ಕೊಟ್ಟಿದ್ದಾರೆ. ಕರ್ನಾಟಕಕ್ಕೆ ಪಂಗನಾಮ ಹಾಕಿದ್ದಾರೆ ಎಂದು ತೀಕ್ಷ್ಣವಾಗಿ ಟೀಕಿಸಿದ್ದಾರೆ.
ಆಂಧ್ರಪ್ರದೇಶ-ಬಿಹಾರ ರಾಜ್ಯಗಳಿಗೆ ವಿಶೇಷ ಅನುದಾನ ಕೊಟ್ಟಿದ್ದಾರೆ, ಬೇರೆ ರಾಜ್ಯಗಳಿಗೆ ಯಾವುದೇ ಕೊಡುಗೆ ನೀಡಿಲ್ಲ. ಏಕೆಂದರೆ ನರೇಂದ್ರ ಮೋದಿ ಪ್ರಧಾನಿಯಾಗಿ ಉಳಿಯಬೇಕಂದ್ರೆ ಆ ರಾಜ್ಯಗಳ ಸಹಕಾರ ಬೇಕು, ಅದಕ್ಕಾಗಿ ವಿಶೇಷ ಅನುದಾನವನ್ನ ಕೊಟ್ಟಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ.
ಕರ್ನಾಟಕ ರಾಜ್ಯದ ಪ್ರಮುಖ ಯೋಜನೆ ಭದ್ರಾ ಮೇಲ್ದಂಡೆ ಯೋಜನೆಗೆ ಕಳೆದ ಬಾರಿಯೇ ಅನುದಾನ ಬಿಡುಗಡೆ ಮಾಡುತ್ತೇವೆ ಎಂದಿದ್ದ ಕೇಂದ್ರ ಸರ್ಕಾರ ಇಂದು ಮಂಡಿಸಿದ ಬಜೆಟ್ ನಲ್ಲಿ ಭದ್ರಾ ಮೇಲ್ದಂಡೆ ಯೋಜನೆಗೆ ಯಾವುದೇ ರೀತಿಯಲ್ಲಿ ಪ್ರಸ್ತಾಪಿಸದೇ ದಾವಣಗೆರೆ ಜಿಲ್ಲೆ ಸೇರಿದಂತೆ 7-8 ಜಿಲ್ಲೆಗಳ ರೈತರಿಗೆ ದ್ರೋಹ ಬಗೆದಿದ್ದಾರೆ ಎಂದು ದೂರಿದ್ದಾರೆ.
ನಿರ್ಮಲಾ ಸೀತಾರಾಮನ್ ಕರ್ನಾಟಕದಿಂದ ರಾಜ್ಯಸಭೆಗೆ ಹೋದವರು. ಕರ್ನಾಟಕದ ಹಿತ ಕಾಪಾಡಿ, ನ್ಯಾಯ ಕೊಡ್ತಾರೆ ಎಂಬ ನಿರೀಕ್ಷೆ ಇತ್ತು. ಆದರೆ ಕರ್ನಾಟಕದ ಜನತೆಗೆ ನಿರಾಸೆ ಮಾಡಿದ್ದಾರೆ. ನೀರಾವರಿ ಯೋಜನೆಗಳ ಅನುಷ್ಠಾನದ ನಿರೀಕ್ಷೆ ಇತ್ತು. ಅದಕ್ಕೂ ಅನಯದಾನ ಇಟ್ಟಿಲ್ಲ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕಲ್ಯಾಣ ಕರ್ನಾಟಕಕ್ಕೆ ಮ್ಯಾಚಿಂಗ್ ಗ್ರ್ಯಾಂಟ್ ಕೊಟ್ಟಿಲ್ಲ. ಭದ್ರಾ ಮೇಲ್ದಂಡೆ, ಮಹದಾಯಿ, ಮೇಕೆದಾಟು ಬಗ್ಗೆ ಯಾವುದೇ ಪ್ರಸ್ತಾಪ ಇಲ್ಲ. ರೈತರಿಗೂ ಯಾವುದೂ ಪ್ರಯೋಜನ ಆಗಿಲ್ಲ, ರೈತರು-ಬಡವರಿಗೆ ದೊಡ್ಡ ಅನ್ಯಾಯ ಮಾಡಿದ್ದಾರೆ. ಕನಿಷ್ಠ ಬೆಂಬಲ ಬೆಲೆ ನಿಗದಿಗೆ ಕಾಯ್ದೆ ಮಾಡಿ ಅಂತ ರೈತರಿಂದ ಬಹಳದಿನಗಳ ಬೇಡಿಕೆ ಇತ್ತು, ಆದೂ ಆಗಿಲ್ಲ. ಇಲಾಖಾವಾರು ಅನುದಾನ ತುಂಬಾ ಕಡಿಮೆ ಕೊಟ್ಟಿದ್ದಾರೆ. ಶಿಕ್ಷಣಕ್ಕೆ 1.25 ಲಕ್ಷ ಕೋಟಿ ಅಷ್ಟೇ ಕೊಟ್ಟಿದ್ದಾರೆ ಎಂದು ಟೀಕಿಸಿದ್ದಾರೆ.
ದಲಿತರ ಬಗ್ಗೆ ಮಾತನಾಡುವ ಇವರು ಅನುದಾನ ಕಡಿಮೆ ಮಾಡಿದ್ದಾರೆ. ಕಳೆದ ಮಧ್ಯಂತರ ಬಜೆಟ್‍ನಲ್ಲಿ 9409 ಕೋಟಿ ರೂ. ಮೀಸಲಿಟ್ಟಿದ್ರು. ಆದ್ರೆ ಈಗ 6300 ಕೋಟಿ ರೂ. ಮಾತ್ರ ಮೀಸಲಿಟ್ಟಿದ್ದಾರೆ. ಐವರು ಕೇಂದ್ರ ಸಚಿವರಿದ್ದರೂ ರಾಜ್ಯಕ್ಕೆ ಯಾವುದೇ ಪ್ರಯೋಜನ ಆಗಿಲ್ಲ. ಕೈಗಾರಿಕಾ, ರೈಲ್ವೆ ಕೃಷಿ ಕ್ಷೇತ್ರಗಳಿಗೆ ಯಾವುದೆ ಕೊಡುಗೆ ಇಲ್ಲ. ಕೇಂದ್ರ ಸರ್ಕಾರ ಕರ್ನಾಟಕಕ್ಕೆ ಪಂಗನಾಮ ಹಾಕಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.



