ದಾವಣಗೆರೆ: ಯುಗಾದಿ ಹಬ್ಬಕ್ಕೆ ಚರಂಡಿ ಸ್ವಚ್ಛಗೊಳಿಸಲು ತೆರಳಿದ್ದ ಇಬ್ಬರು ಕೂಲಿ ಕಾರ್ಮಿಕರು ವಿಷಗಾಳಿ ಸೇವನೆಯಿಂದಾಗಿ ತೀವ್ರ ಅಸ್ವಸ್ಥಗೊಂಡು ಸಾವನ್ನಪ್ಪಿದ ಘಟನೆ ಜಿಲ್ಲೆಯ ಜಗಳೂರು ತಾಲೂಕು ಬಸವನಕೋಟೆ ಗ್ರಾ.ಪಂ. ವ್ಯಾಪ್ತಿಯಲ್ಲಿ ನಡೆದಿದೆ.
ಸತ್ಯಪ್ಪ(44), ಮೈಲಪ್ಪ(42) ಮೃತಪಟ್ಟ ಕಾರ್ಮಿಕರು. ಬಸವನಕೋಟೆ ಗ್ರಾ.ಪಂ.ಯಿಂದ ಯುಗಾದಿ ಹಬ್ಬಕ್ಕೆ ಊರಿನ ಚರಂಡಿ ಸ್ವಚ್ಛಗೊಳಿಸುವಂತೆ ಸತ್ಯಪ್ಪ,
ಮೈಲಪ್ಪಗೆ ಹೇಳಿದ್ದರು. ಗ್ರಾ.ಪಂ. ಸೂಚನೆಯಂತೆ ಗ್ರಾಮದ ಚರಂಡಿಯನ್ನು ಸ್ವಚ್ಛಗೊಳಿಸುವ ಕಾರ್ಯದಲ್ಲಿ ತೊಡಗಿದ್ದ ಸತ್ಯ ಪ್ಪಮೈಲಪ್ಪ ಚರಂಡಿಯಿಂದ ಬಂದ ವಿಷಗಾಳಿಯಿಂದಾಗಿ ತೀವ್ರ ಅಸ್ವಸ್ಥರಾಗಿದ್ದಾರೆ. ತಕ್ಷಣವೇ ಇಬ್ಬರನ್ನೂ ದಾವಣಗೆರೆ ಜಿಲ್ಲಾಸ್ಪತ್ರೆಗೆ ಕರೆ ತಂದು ದಾಖಲಿಸಿದ್ದಾರೆ. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಬಿಳಿಚೋಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೃತ ಸತ್ಯಪ್ಪ, ಮೈಲಪ್ಪನ ಕುಟುಂಬಗಳಿಗೆ
ತಲಾ 1 ಕೋಟಿ ರೂ. ಪರಿಹಾರ ನೀಡುವಂತೆ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಒತ್ತಾಯಿಸಿದೆ. ವರ್ಷಗಳಿಂದ ತುಂಬಿದ್ದ ಚರಂಡಿಯನ್ನು ಬಡ, ಅಮಾಯಕ ಕೆಲಸಗಾರರನ್ನು ಬಳಸಿಕೊಂಡು, ಸ್ವಚ್ಛಗೊಳಿಸಿದ್ದು ಅಕ್ರಮ ಮತ್ತು ಕಾನೂನು ಬಾಹಿರವಾಗಿದೆ. ಕಾನೂನು ಪ್ರಕಾರ ಇಂತಹ ಕೆಲಸಕ್ಕೆ ಯಾವುದೇ ವ್ಯಕ್ತಿಯನ್ನು ಬಳಸಿಕೊಳ್ಳಬಾರದು. ಚರಂಡಿ ಸ್ವಚ್ಛಗೊಳಿಸಲು ಮೈಲಪ್ಪ,
ಸತ್ಯಪ್ಪನಿಗೆ ಕರೆಸಿ, ಕೆಲಸ ವಹಿಸಿದ್ದ ಗ್ರಾ.ಪಂ. ನವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು. ಮೃತ ಕುಟುಂಬಕ್ಕೆ ತಲಾ
ಕೋಟಿ ಪರಿಹಾರ, ಉಭಯ ಕುಟುಂಬದ ತಲಾ ಒಬ್ಬರಿಗೆ ಸರ್ಕಾರಿ ನೌಕರಿ ನೀಡಬೇಕು ಎಂದು ಆಗ್ರಹಿಸಿದ್ದಾರೆ.



