ಸಿರಿಗೆರೆ: ಪ್ರೊ.ಜಿ.ವೆಂಕಟಸುಬ್ಬಯ್ಯ ಅವರ ನಿಧನಕ್ಕೆ ಸಿರಿಗೆರೆ ಶ್ರೀ ತರಳಬಾಳು ಜಗದ್ಗುರು ಬೃಹನ್ಮಠದ ಶ್ರೀ ತರಳಬಾಳು ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ಶ್ರೀ ತರಳಬಾಳು ಜಗದ್ಗುರು ಲಿಂಗೈಕ್ಯ ಶ್ರೀ ಶಿವಕುಮಾರ ಶಿವಾಚಾರ್ಯಾ ಮಹಾಸ್ವಾಮಿಗಳವರ ಕಾಲದಿಂದಲೂ ಪ್ರೊ.ವೆಂಕಟಸುಬ್ಬಯ್ಯನವರು ಮಠದೊಂದಿಗೆ ಮಧುರ ಸಂಬಂಧ ಹೊಂದಿದ್ದರು.1940 ರ ದಶಕದಲ್ಲಿ ದಾವಣಗೆರೆಯಲ್ಲಿ ಸರಕಾರಿ ಪ್ರೌಢಶಾಲಾ ಶಿಕ್ಷಕರಾಗಿ ಕಾರ್ಯನಿರ್ವಹಿಸಿದ್ದರು. ಸರಕಾರಿ ವೇತನದಲ್ಲಿ ಜೀವನ ನಿರ್ವಹಿಸಲು ಸಾಧ್ಯವಾಗದಿರುವ ಬಗ್ಗೆ ಲಿಂಗೈಕ್ಯ ಶ್ರೀಜಗದ್ಗುರುಗಳವರಿಗೆ ಅರಿಕೆ ಮಾಡಿಕೊಂಡಿದ್ದ ವೆಂಕಟಸುಬ್ಬಯ್ಯನವರಿಗೆ ನೆರವಾದ ನಮ್ಮ ಗುರುವರ್ಯರು ದಾವಣಗೆರೆಯಲ್ಲಿರುವ ಶ್ರೀ ತರಳಬಾಳು ಜಗದ್ಗುರು ವಿದ್ಯಾರ್ಥಿ ನಿಲಯದಲ್ಲಿ ಗ್ರಾಮೀಣ ವಿದ್ಯಾರ್ಥಿಗಳಿಗೆ ಇಂಗ್ಲಿಷ್ ಪಾಠವನ್ನು ಹೇಳಿಕೊಡುವಂತೆ ತಿಳಿಸಿದ್ದರು.
ಆಗ ಸರ್ಕಾರಿ ಸಂಬಳಕ್ಕಿಂತಲೂ ಹೆಚ್ಚಿನ ವೇತನವನ್ನು ನೀಡಿ ನೆರವಾಗಿದ್ದನ್ನು ಜೀವಿಯವರು ಕೃತಜ್ಞತೆಯಿಂದ ಹಲವಾರು ಭಾರಿ ಸ್ಮರಿಸಿಕೊಂಡಿದ್ದರು. ಅವರಿಗೆ ಪಿತ್ರಾರ್ಜಿತವಾಗಿ ಬಳುವಳಿಯಾಗಿ ಬಂದದ್ದು, ಬಡತನ ಮತ್ತು ಬವಣೆಯ ಬದುಕು. ಬವಣೆಯ ಬದುಕು ಎದುರಿಗಿದ್ದರೂ ಅವರು ಮೌಲ್ಯಗಳನ್ನು ಬಿಡಲಿಲ್ಲ. ಯಾವುದೆರೊಂದಿಗೂ ರಾಜಿ ಮಾಡಿಕೊಳ್ಳಲಿಲ್ಲ. ಸಾಹಿತ್ಯವನ್ನು ಶ್ರೀಮಂತಗೊಳಿಸುತ್ತಾ ಮುಂದೆ ಸಾಗಿದರು.ಅದರಲ್ಲೇ ಧನ್ಯತೆ ಕಂಡುಕೊಂಡರು. ಸಾಹಿತ್ಯ ಸರಸ್ವತಿಯ ಸಿರಿಮುಡಿ ಪರಿಶೋಭಿಸುವಂತೆ ಮಾಡಿದರು ಎಂದು ಗುಣಗಾನ ಮಾಡಿದ್ದಾರೆ.
ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಲು ಅವರು ನೀಡಿದ ಕೊಡುಗೆಯನ್ನು ಕೊಂಡಾಡಿದ ಶ್ರೀಜಗದ್ಗುರುಗಳು ಕೆಲವು ವರ್ಷಗಳ ಹಿಂದೆ ಬೆಂಗಳೂರಿನ ತರಳಬಾಳು ಕೇಂದ್ರಕ್ಕೆ ವೆಂಕಟಸುಬ್ಬಯ್ಯನವರನ್ನು ಬರಮಾಡಿಕೊಂಡು ಗೌರವಿಸಿದ್ದನ್ನು ನೆನಪನ್ನು ಮಾಡಿಕೊಂಡು ಸಂದೇಶದಲ್ಲಿ ಉಲ್ಲೇಖಿದ್ದಾರೆ.



