ದಾವಣಗೆರೆ: ಸಾಹಿತಿಗಳಿಗೆ ಬೆದರಿಕೆ ಪತ್ರ ಬರೆದ ಆರೋಪಿ ಶಿವಾಜಿ ರಾವ್ ಜಾಧವ್‌ನನ್ನು ಸಿಸಿಬಿ ಪೊಲೀಸರು ದಾವಣಗೆರೆಯ ಮನೆಗೆ ಕರೆತಂದು ಮಹಜರು ನಡೆಸಿದ್ದಾರೆ.
ಪತ್ರಗಳನ್ನು ಶಿವಾಜಿ ರಾವ್ ಜಾಧವ್ ಒಬ್ಬನೇ ಬರೆಯುತ್ತಿದ್ದನಾ? ಅವನಿಂದ ಯಾರಾದರೂ ಬರೆಸುತ್ತಿದ್ದರಾ? ಈ ಬಗ್ಗೆ ಯಾರ ಕೈವಾಡವಿದೆ ಎಂಬ ಬಗ್ಗೆಯೂ ತನಿಖೆ ನಡೆಸಲಾಗುತ್ತದೆ ಎಂದು ಗೃಹ ಸಚಿವ ಜಿ. ಪರಮೇಶ್ವರ್ ಹೇಳಿದ್ದಾರೆ. ಸಾಹಿತಿಗಳು ತಮಗೆ ಬೆದರಿಕೆ ಕರೆ ಬರುವ ಕುರಿತು ನನ್ನ ಬಳಿ ಹೇಳಿಕೊಂಡದ್ದರು. ಸಾಹಿತಿಗಳ ಅಹವಾಲು ನಾನು ಕೇಳಿದ್ದೆ. ಸಿಎಂಗೂ ಭೇಟಿ ಮಾಡಿ ಸಾಹಿತಿಗಳು ಬೆದರಿಕೆ ಕರೆ ಬಗೆ ಹೇಳಿದ್ದರು. ನಾವು ಆ ಪ್ರಕರಣವನ್ನು ಸಿಸಿಬಿಗೆ ವಹಿಸಿದ್ದೆವು. ಸಿಸಿಬಿ ಪೊಲೀಸರು ದಾವಣಗೆರೆ ಮೂಲದವರನ್ನು ಬಂಧಿಸಿದ್ದಾರೆ. ಆತನ ಹಿಂದೆ ಯಾರಿದ್ದಾರೆ? ಯಾರು ಬರೆಸ್ತಾ ಇದ್ದಾರೆ ಅನ್ನೋದು ತನಿಖೆ ಆಗುತ್ತದೆʼʼ ಎಂದ ಪರಮೇಶ್ವರ್ ಅವರು, ಯಾವ ಸರ್ಕಾರ ಇದ್ದರೂ ಕೂಡ ಅವರು ಬೆದರಿಕೆ ಹಾಕುತ್ತಾರೆ ಎಂದರು.
ಸಾಹಿತಿಗಳಿಗೆ ಬೆದರಿಕೆ ಪ್ರಕರಣಕ್ಕೆ ಸಂಬಂಧ ರಾಜ್ಯದ ವಿವಿಧ ಠಾಣೆಗಳಲ್ಲಿ ಒಟ್ಟು 8 ಪ್ರಕರಣಗಳು ದಾಖಲಾಗಿದ್ದವು. ಕೊಟ್ಟೂರು ಠಾಣೆಯಲ್ಲಿ ಸಾಹಿತಿ ಕುಂ.ವೀರಭಧ್ರಪ್ಪ ಪ್ರಕರಣ ದಾಖಲಿಸಿದ್ದರು. ಚಿತ್ರದುರ್ಗದಲ್ಲಿ ಸಾಹಿತಿ ಬಿಎಲ್ ವೇಣು, ಹಾರೋಹಳ್ಳಿ ಠಾಣೆಯಲ್ಲಿ ಬಂಜಗೆರೆ ಜಯಪ್ರಕಾಶ್, ಸಂಜಯನಗರ ಠಾಣೆಯಲ್ಲಿ ಬಿ.ಟಿ. ಲಲಿತಾ ನಾಯ್ಕ್, ಬಸವೇಶ್ವರ ನಗರ ಠಾಣೆಯಲ್ಲಿ ವಸುಂಧರಾ ಭೂಪತಿ ಪ್ರಕರಣ ದಾಖಲು ಮಾಡಿದ್ದರು.
ನಮ್ಮ ತಮ್ಮ ಒಬ್ಬ ಹಿಂದೂವಾದಿಯಾಗಿದ್ದ. ರಾಷ್ಟ್ರೀಯವಾದಿಯಾಗಿದ್ದ. ಹಿಂದುತ್ವದ ವಿಚಾರಗಳಲ್ಲಿ ಹೆಚ್ಚಾಗಿ ತನ್ನನ್ನು ತಾನು ತೊಡಗಿಸಿಕೊಂಡಿದ್ದ. ಆದರೆ, ಈ ರೀತಿಯಾಗಿ ಬೆದರಿಕೆ ಹಾಕಿದ್ದಾನೆ ಎಂದು ನಂಬಲಾಗುತ್ತಿಲ್ಲ ಎಂದು ಶಿವಾಜಿ ರಾವ್ ಜಾಧವ್ ಸಹೋದರ ಗುರುರಾಜ್ ಹೇಳಿದ್ದಾರೆ.
ಶಿವಾಜಿ ರಾವ್ , ದಾವಣಗೆರೆಯ EWS ಕಾಲೋನಿಯಲ್ಲಿ ಆತನ ಕುಟುಂಬ ವಾಸಿಸುತ್ತಿದೆ. ಶಿವಾಜಿ ರಾವ್‌ಗೆ ಸೋದರ ಮತ್ತು ತಾಯಿ ಇದ್ದಾರೆ. ಮಾಧ್ಯಮದಲ್ಲಿ ಬರುವುದು ನೋಡಿ ನಮಗೆ ಭಯ ಆಗ್ತಿದೆ. ನಮ್ಮ ತಮ್ಮನ ನ್ಯೂಸ್ ಬರೋದನ್ನ ನೋಡಿ ನಮ್ಮ ತಾಯಿ ಕಣ್ಣೀರು ಹಾಕುತ್ತಿದ್ದಾರೆ. ಶಿವಾಜಿ ರಾವ್ ಸುಮಾರು ವರ್ಷಗಳಿಂದ ಪ್ರಿಂಟಿಂಗ್ ಪ್ರೆಸ್‌ನಲ್ಲಿ ಕೆಲಸ ಮಾಡುತ್ತಿದ್ದಾನೆ. ಬೆಳಗ್ಗೆ 4 ಗಂಟೆಗೆ ಎದ್ದು ಭಗವದ್ಗೀತೆ ಓದುತ್ತಿದ್ದ. ಯಾರ ತಂಟೆಗೂ ಹೋಗುತ್ತಿರಲಿಲ್ಲ ಎಂದಿದ್ದಾರೆ.
ಅವನಿಗೆ ಹಿಂದುತ್ವದಲ್ಲಿ ಅತೀವ ನಂಬಿಕೆ ಇತ್ತು. ರಾಷ್ಟ್ರೀಯತೆ ಮತ್ತು ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದ. ಧಾರ್ಮಿಕ ವಿಚಾರದಲ್ಲಿ ಮಾತನಾಡಿದವರಿಗೆ ಆ ರೀತಿ ಮಾತನಾಡಬೇಡಿ ಎಂದು ಮನವಿ ಮಾಡಿಕೊಂಡಿರಬೇಕು. ಜೀವ ಬೆದರಿಕೆ ಹಾಕುವ ಮಟ್ಟಿಗೆ ಹೋಗುವಂತ ಮನೋಭಾವ ಆತನಿಗಿಲ್ಲ. ಆತ ಯಾರಿಗೂ ಕೂಡ ಬೆದರಿಕೆ ಹಾಕುವಂತ ವ್ಯಕ್ತಿಯಲ್ಲ.
ಕುಟುಂಬದ ಜೊತೆ ಬೆರೆಯುವುದು ಕಡಿಮೆ. ಆತನಿಗೆ ಇನ್ನೂ ಮದುವೆ ಆಗಿಲ್ಲ. ಜನರಿಗೆ ನಿಸ್ವಾರ್ಥ ಸೇವೆ ಮಾಡುತ್ತಿದ್ದ, ಯಾವಾಗಲೂ ಒಳ್ಳೆಯದನ್ನೇ ಬಯಸುತ್ತಿದ್ದ. ಸೂಕ್ಷ್ಮ ವ್ಯಕ್ತಿತ್ವ ಹೊಂದಿರುವ ನನ್ನ ತಮ್ಮ ಈ ತರಹ ಮಾಡಿದ್ದಾನೆ ಅಂದ್ರೆ ನಂಗೆ ನಂಬಲಿಕ್ಕೆ ಆಗುತ್ತಿಲ್ಲ ಇನ್ನೊಬ್ಬ ಸಹೋದರ ಹೇಳಿದ್ದಾರೆ.



