ದಾವಣಗೆರೆ: ಪಾಠ ಹೇಳಿಕೊಡುವ ಶಿಕ್ಷರನ್ನು ಅವಮಾನಿಸಿ, ತಲೆಗೆ ಕಸದ ಬುಟ್ಟಿ ಹಾಕಿ ಕುಚೇಷ್ಠೆ ಮಾಡಿದ ಜಿಲ್ಲೆಯ ಚನ್ನಗಿರಿ ತಾಲ್ಲೂಕು ನಲ್ಲೂರಿನ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಹೈಸ್ಕೂಲ್ ವಿಭಾಗದ 10 ನೇ ತರಗತಿ ಓದುತ್ತಿರುವ 6 ವಿದ್ಯಾರ್ಥಿಗಳ ವಿರುದ್ಧ ದೂರು ದಾಖಲಾಗಿದೆ.
ನಲ್ಲೂರಿನ ಸರ್ಕಾರಿ ಜೂನಿಯರ್ ಕಾಲೇಜಿನ ಹೈಸ್ಕೂಲ್ ವಿಭಾಗದಲ್ಲಿ ಹಿಂದಿ ಶಿಕ್ಷಕರಾಗಿ ಕಾರ್ಯ ನಿರ್ವಹಿಸುತ್ತಿರುವ ಪ್ರಕಾಶ್ ಬೋಗಾರ್ ಅವರ ಮೇಲೆ ವಿದ್ಯಾರ್ಥಿಗಳು ಹಲ್ಲೆ ನಡೆಸಿ ವಿಕೃತಿ ಪ್ರದರ್ಶಿಸಿದ್ದಾರೆ. ಪ್ರಕಾಶ್ ಅವರು ಡಿ03 ರಂದು ಪಾಠ ಮಾಡಲು ತರಗತಿಗೆ ಬಂದ ಸಮಯದಲ್ಲಿ ನಾಲ್ಕೈದು ವಿದ್ಯಾರ್ಥಿಗಳು ತಲೆಯ ಮೇಲೆ ಕಸದ ಬುಟ್ಟಿ ಹಾಕಿ ಪುಂಡತನ ತೋರಿಸಿದ್ದಾರೆ. ಇದನ್ನು ಅಲ್ಲಿದ್ದ ವಿದ್ಯಾರ್ಥಿಗಳು ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಈ ವಿಡಿಯೋ ನೋಡಿದ ಗ್ರಾಮಸ್ಥರು, ಪೋಷಕರು ವಿದ್ಯಾರ್ಥಿಗಳ ವಿರುದ್ಧ ಆಕ್ರೋಶಕ್ಕೆ ಕಾರಣವಾಗಿತ್ತು.
ವಿದ್ಯಾರ್ಥಿಗಳು ಕ್ಲಾಸ್ ನಲ್ಲಿ ಅನುಚಿತವಾಗಿ ವರ್ತಿಸುತ್ತಿದ್ದರು, ಇದರಿಂದ ಶಿಕ್ಷಕ ಪ್ರಕಾಶ್ ಅವರು ವಿದ್ಯಾರ್ಥಿಗಳಿಗೆ ಬೈಯ್ದು ಶಿಸ್ತು ಕಾಪಾಡುವಂತೆ ಸಲಹೆ ನೀಡಿದೆ, ಅದರಿಂದ ಅವರು ನನ್ನ ಜೊತೆ ಜಗಳವಾಡಿದರು. ನಂತರ ಬಕೆಟ್ ತೆಗೆದುಕೊಂಡು ನನ್ನ ಮೇಲೆ ಹಾಕಿದರು. ನನಗೆ ಅವರ ವರ್ತನೆಯಿಂದ ಭಯ ವಾಗಿ ದೂರು ನೀಡಬೇಕೆಂದುಕೊಂಡಿದ್ದೆ. ಆದರೆ, ವಿದ್ಯಾರ್ಥಿಗಳ ಭವಿಷ್ಯ ದೃಷ್ಠಿಯಿಂದ ದೂರು ನೀಡಿರಲಿಲ್ಲ ಎಂದು ಶಿಕ್ಷಕರು ಹೇಳಿದ್ದಾರೆ.
ಶಿಕ್ಷಕರಿಗೆ ಮಾಡಿದ ಅವಮಾನವನ್ನು ವಿದ್ಯಾರ್ಥಿಗಳೇ ವಿಡಿಯೋ ಮಾಡಿ, ಸಾಮಾಜಿಕ ಜಾಲತಾಣದಲ್ಲಿ ಹರಿ ಬಿಟ್ಟಿದ್ದರು. ಈ ವಿಡಿಯೋ ನೋಡಿದ ಊರಿನ ಗ್ರಾಮಸ್ಥರು ಹಾಗೂ ಕೆಲ ಸಂಘಟನೆ ಕಾರ್ಯಕರ್ತರು ವಿದ್ಯಾರ್ಥಿಗಳ ವಿರುದ್ಧ ದೂರು ದಾಖಲಿಸಿ ಕ್ರಮ ಕೈಗೊಳ್ಳಬೇಕು ಎಂದು ಶಾಸಕರನ್ನು ಆಗ್ರಹಿಸಿದ ಹಿನ್ನೆಲೆ ಪ್ರಕರಣದಲ್ಲಿ ಭಾಗಿಯಾದ 6 ವಿದ್ಯಾರ್ಥಿಗಳ ವಿರುದ್ಧ ಪ್ರಕರಣ ದಾಖಲಾಗಿದೆ.
ಶಾಸಕ ಮಾಡಾಳು ವಿರೂಪಾಕ್ಷಪ್ಪ, ಡಿಡಿಪಿಐ ಶಾಲೆಗೆ ಆಗಮಿಸಿ ಘಟನೆಯ ಮಾಹಿತಿ ಪಡೆದುಕೊಂಡರು. ಈ ಕುರಿತು ಜಿಲ್ಲಾಧಿಕಾರಿ ಮಹಾಂತೇಶ್ ಆರ್. ಬೀಳಗಿ ಪ್ರತಿಕ್ರಿಯೆ ನೀಡಿದ್ದು, ವಿದ್ಯಾರ್ಥಿಗಳು ಮಾಡಿರುವ ಕುಚೇಷ್ಠೆ ನನ್ನ ಗಮನಕ್ಕೆ ಬಂದಿದೆ. ಯಾರೇ ತಪ್ಪು ಮಾಡಿದ್ದರೂ ಕ್ರಮ ತೆಗೆದುಕೊಳ್ಳುತ್ತೇವೆ. ಶಿಕ್ಷಕರ ಕಡೆಯಿಂದ ತಪ್ಪಿದ್ದರೂ ಸಹ ಕ್ರಮ ಆಗುತ್ತದೆ. ವಿದ್ಯಾರ್ಥಿಗಳು ಈ ರೀತಿಯಾದ ಅವಮಾನ ಮಾಡಿರುವುದಕ್ಕೆ ಕಾರಣವೇನು ಎಂಬ ಬಗ್ಗೆ ವರದಿ ನೀಡುವಂತೆ ದಾವಣಗೆರೆ ಡಿಡಿಪಿಐಗೆ ಸೂಚನೆ ನೀಡಲಾಗುವುದು ಎಂದಿದ್ದಾರೆ.