ದಾವಣಗೆರೆ: ಐಸಿಎಆರ್ ತರಳಬಾಳು ಕೃಷಿ ವಿಜ್ಞಾನ ಕೇಂದ್ರದ ರಾಷ್ಟ್ರೀಯ ಆಹಾರ ಭದ್ರತಾ ಯೋಜನೆ ಅಡಿಯಲ್ಲಿ ಚನ್ನಗಿರಿ ತಾಲೂಕಿನ ನೀತಗೆರೆ ಗ್ರಾಮದಲ್ಲಿ ಎಣ್ಣೆಕಾಳು ಬೆಳೆಯಾದ ಸೋಯಾಬೀನ್ ಬೆಳೆ ಸಮಗ್ರ ನಿರ್ವಹಣೆ ಮತ್ತು ಮುಂಚೂಣಿ ಪ್ರಾತ್ಯಕ್ಷಿಕೆ ಹಮ್ಮಿಕೊಳ್ಳಲಾಗಿತ್ತು.
ಐಸಿಎಆರ್ ತರಳಬಾಳು ಕೃಷಿ ವಿಜ್ಞಾನ ಕೇಂದ್ರದ ಬೇಸಾಯ ತಜ್ಞರು ಮಲ್ಲಿಕಾರ್ಜುನ ಬಿ ಓ ಕ್ಷೇತ್ರಕ್ಕೆ ಭೇಟಿ ನೀಡಿ, ಸೋಯಾಬೀನ್ ಈ ಪ್ರದೇಶಕ್ಕೆ ಹೊಸಬೆಳೆಯಾಗಿದ್ದು, ಉತ್ತಮವಾಗಿ ಬಂದಿರುತ್ತದೆ. ಸೋಯಾಬಿನ್ ನವೀನ ತಳಿಯಾದ DSB 34 ಬೆಳೆ ಹೂವಾಡುವ ಹಾಗೂ ಕಾಯಿ ಕಟ್ಟುವ ಹಂತದಲ್ಲಿದ್ದು ಈ ಸಂದರ್ಭದಲ್ಲಿ ನೀರಿನಲ್ಲಿ ಕರಗುವ ಗೊಬ್ಬರಗಳಾದ ಪೊಟಾಸಿಯಂ ನೈಟ್ರೇಟ್ (13:00:45) 5 ಗ್ರಾಂ ಪ್ರತಿ ಲೀಟರ್ ನೀರಿನಲ್ಲಿ ಹಾಗೂ ಕಾಯಿ ಕೊರಕದ ಬಾಧೆ ಕಂಡು ಬಂದಲ್ಲಿ Emamectin benzoate 0.5 ಗ್ರಾಂ ಪ್ರತಿ ಲೀಟರ್ ನೀರಿನಲ್ಲಿ ಮಿಶ್ರಣ ಮಾಡಿ ಸಿಂಪರಣೆ ಮಾಡಬೇಕು. ಸಿಂಪಡಣೆಯನ್ನು ಬೆಳಿಗ್ಗೆ 8 ರಿಂದ 10 ಗಂಟೆ ಒಳಗೆ ಹಾಗೂ ಸಂಜೆ 4 ರಿಂದ 6 ರ ಒಳಗೆ ಮಾಡುವುದು ಸೂಕ್ತ ಎಂದರು.
ತರಳಬಾಳು ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾಕ್ಟರ್ ದೇವರಾಜ ಟಿ ಎಂ ಮಾತನಾಡಿ, ರಾಷ್ಟ್ರೀಯ ಆಹಾರ ಭದ್ರತಾ ಯೋಜನೆ ಅಡಿಯಲ್ಲಿ ಎಣ್ಣೆಕಾಳುಗಳ ಬೆಳೆಯ ಉತ್ಪಾದನೆ ಹಾಗೂ ಉತ್ಪಾದಕತೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಆಧುನಿಕ ತಂತ್ರಜ್ಞಾನಗಳು ಹಾಗೂ ಅಧಿಕ ಇಳುವರಿ ಕೊಡುವ ಹೊಸ ತಳಿ ಬಳಸುವುದರಿಂದ ಇಳುವರಿ ಹೆಚ್ಚಳವಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಪ್ರಗತಿಪರ ಕೃಷಿಕರು ಹಾಗೂ ವಿವಿಧ ಇಲಾಖೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸಖಿಯಾರು ಭಾಗವಹಿಸಿದ್ದರು.



