ದಾವಣಗೆರೆ: ಅಡಿಕೆ ಬೆಳೆಗಳಲ್ಲಿ ಹಸಿರೆಲೆಗೊಬ್ಬರವಾಗಿ ವೆಲ್‌ವೆಟ್ ಬೀನ್ಸ್ ಬೆಳೆಯುವುದರಿಂದ ಮಣ್ಣಿನ ಗುಣಧರ್ಮಗಳು ಉತ್ತಮವಾಗುವುದಲ್ಲದೆ ಕಳೆ ನಿಯಂತ್ರಣಕ್ಕೂ ಸಹಾಯವಾಗುವುದೆಂದು ಐಸಿಎಆರ್-ತರಳಬಾಳು ಕೃಷಿ ವಿಜ್ಞಾನ ಕೇಂದ್ರದ ತೋಟಗಾರಿಕೆ ವಿಜ್ಞಾನಿ ಬಸವನಗೌಡ ಎಂ.ಜಿ. ತಿಳಿಸಿದರು.
ಚನ್ನಗಿರಿ ತಾಲ್ಲೂಕು ಹಿರೇಕೋಗಲೂರು ಗ್ರಾಮದಲ್ಲಿ ಹಿರೇಕೋಗಲೂರು ತರಳಬಾಳು ಅಮೃತ ರೈತ ಉತ್ಪಾದಕ ಕಂಪನಿ ಹಾಗೂ ತರಳಬಾಳು ಕೃಷಿ ವಿಜ್ಞಾನ ಕೇಂದ್ರದ ಸಂಯುಕ್ತಾಶ್ರಯದಲ್ಲಿ ‘ಅಡಿಕೆ ಬೆಳೆಯ ಸಮಗ್ರ ಬೆಳೆ ನಿರ್ವಹಣೆ’ ಕುರಿತು ಪ್ರಾತ್ಯಕ್ಷಿಕೆ ಕಾರ್ಯಕ್ರಮವನ್ನು ಕುರಿತು ಮಾತನಾಡಿದರು.
ಪ್ರಸ್ತುತ ವರ್ಷ ಅತೀ ಹೆಚ್ಚು ಮಳೆಯಿಂದಾಗಿ ಭೂಮಿಯ ಸತ್ವ ಕಳೆದು ಹೋಗಿದೆ. ಭೂಮಿಯಲ್ಲಿನ ಫಲವತ್ತತೆಯನ್ನು ಹೆಚ್ಚಿಸಲು ಹಸಿರೆಲೆ ಗೊಬ್ಬರವಾಗಿ ವೆಲೆವೆಟ್ ಬೀನ್ಸ್ ಅನ್ನು ಪ್ರತೀ ಎಕರೆಗೆ 4 ಕೆಜಿ ಯಂತೆ ಬೆಳೆಯಬೇಕು. ಸುಮಾರು 3-4ತಿಂಗಳು ಭೂಮಿಯಲ್ಲಿ ಕಳೆ ನಿರ್ವಹಣೆಯ ಜೊತೆಗೆ ಹೊದಿಕೆಯಾಗಿ ಕೆಲಸ ಮಾಡುತ್ತದೆ ಹಾಗೂ ಮಣ್ಣಿನ ಭೌತಿಕ ಮತ್ತು ರಾಸಾಯನಿಕ ಗುಣಗಳು ವೃದ್ಧಿಯಾಗುತ್ತವೆ ಎಂದು ತಿಳಿಸಿದರು.
ಕೇಂದ್ರದ ಬೇಸಾಯ ತಜ್ಞ ಮಲ್ಲಿಕಾರ್ಜುನ ಬಿ.ಓ ಮಾತನಾಡಿ, ಭೂಮಿಯಲ್ಲಿ ತೇವಾಂಶ ಹೆಚ್ಚಾಗಿರುವುದರಿಂದ ಎಲ್ಲಾ ಅಡಿಕೆ ತೋಟಗಳು ಹಳದಿ ಬಣ್ಣಕ್ಕೆ ತಿರುಗಿವೆ, ಇಂತಹ ತೋಟಗಳಲ್ಲಿ ಬಸಿಗಾಲುವೆಗಳನ್ನು ಮಾಡವುದರಿಂದ ತೋಟಗಳು ಚೇತರಿಸಿಕೊಳ್ಳುತ್ತವೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಕಂಪನಿಯ ಅಧ್ಯಕ್ಷ ಶಿವಕುಮಾರ್ ಎಸ್. ಆರ್., ಉಪಾಧ್ಯಕ್ಷ ವೈ.ಬಿ. ಜಗದೀಶ್, ನಿರ್ದೇಶಕರಾದ ಭರತರಾಜ್, ಶ್ರೀ ಚಂದ್ರಪ್ಪ ಕೆ.ಎಸ್., ಅಧಿಕಾರಿಗಳಾದ ಪವನ್‌ಪಾಟೀಲ್, ವಿನಯಕುಮಾರ್ ಮತ್ತು ರೈತರುಗಳು ಹಾಜರಿದ್ದರು.



