ದಾವಣಗೆರೆ: ತೋಟಗಾರಿಕೆ ಬೆಳೆಗಳಲ್ಲಿ ಆರ್ಥಿಕ ಸುಸ್ಥಿರತೆಗೆ ಅಂತರ ಬೆಳೆ ಜೊತೆ ನಿಖರ ಕೃಷಿ ಅಳವಡಿಕೆಯಿಂದ ಆರ್ಥಿಕ ಸುಸ್ಥಿರತೆ ಸಾಧ್ಯವೆಂದು ಐಸಿಎಆರ್-ತರಳಬಾಳು ಕೃಷಿ ವಿಜ್ಞಾನ ಕೇಂದ್ರದ ತೋಟಗಾರಿಕೆ ವಿಜ್ಞಾನಿ ಡಾ. ಬಸವನಗೌಡ ಎಂ.ಜಿ. ಅಭಿಪ್ರಾಯಪಟ್ಟರು.
ನ್ಯಾಮತಿ ತಾಲ್ಲೂಕು ಕೆಂಚಿಕೊಪ್ಪ ಗ್ರಾಮದಲ್ಲಿ ಐಸಿಎಆರ್-ತರಳಬಾಳು ಕೃಷಿ ವಿಜ್ಞಾನ ಕೇಂದ್ರ, ಆತ್ಮಯೋಜನೆ, ಕೃಷಿ ಇಲಾಖೆ, ತೋಟಗಾರಿಕೆ ಇಲಾಖೆ, ಕೃಷಿ ತಂತ್ರಜ್ಞಾನ ಸಂಸ್ಥೆಯ ಸಂಯುಕ್ತಾಶ್ರಯಲ್ಲಿ ಹಮ್ಮಿಕೊಂಡ ‘ಕಿಸಾನ್ ಗೋಷ್ಠಿ’ ಕಾರ್ಯಕ್ರಮದಲ್ಲಿ ಮಾತನಾಡಿ, ಅಡಿಕೆ ತೋಟದಲ್ಲಿ ಹನಿ ನೀರಾವರಿ, ರಸಾವರಿ, ಹಸಿರೆಲೆ ಗೊಬ್ಬರಗಳ ಬಳಕೆ,ಸಮತೋಲನ ಪೋಷಕಾಂಶ ಹಾಗೂ ಅಂತರ ಬೆಳೆಗಳಾಗಿ ಕಾಳು ಮೆಣಸು, ಕೋಕೋ ಮತ್ತು ಜಾಯಿಕಾಯಿಗಳನ್ನು
ಬೆಳೆಯುವುದರಿಂದ ಉತ್ತಮ ಇಳುವರಿ ಮತ್ತು ಅದಾಯವನ್ನು ನಿರೀಕ್ಷಿಸಬಹುದೆಂದು ತಿಳಿಸಿದರು.
ಉಪಕೃಷಿ ನಿರ್ದೇಶಕ ರೇವಣಸಿದ್ದನಗೌಡ ಹೆಚ್. ಕೆ. ಮಾತನಾಡಿ, ಈ ವರ್ಷ ಅತೀವೃಷ್ಠಿಯಿಂದ ತಾಲ್ಲೂಕಿನಲ್ಲಿ ಮೆಕ್ಕೆಜೋಳದ ಬೆಳೆಯಲ್ಲಿ ಇಳುವರಿ ಕುಂಠಿತವಾಗಿದೆ.. ರೈತರು ಕೃಷಿಯಲ್ಲಿ ಅನಗತ್ಯ ಖರ್ಚನ್ನು ಕಡಿಮೆ ಮಾಡಬೇಕು
ಹಾಗೂ ನ್ಯಾನೋ ಯೂರಿಯಾ ಮತ್ತು ಡೋನ್ ಸಿಂಪರಣೆಯ ಸದ್ಬಳಕೆ ಮಾಡಿಕೊಳ್ಳಬೇಕೆಂದರು.
ಸಸ್ಯ ಸಂರಕ್ಷಣಾ ತಜ್ಞ ಡಾ. ಅವಿನಾಶ್ ಟಿ.ಜಿ ಮಾತನಾಡಿ, ಪ್ರಮುಖ ತೋಟಗಾರಿಕೆ ಬೆಳೆಗಳ ರೋಗ ಮತ್ತು ಕೀಟ ನಿರ್ವಹಣಾ ಕ್ರಮಗಳ ಬಗ್ಗೆ ಮಾಹಿತಿ ನೀಡಿದರು. ತೋಟಗಾರಿಕೆ ಇಲಾಖೆಯಲ್ಲಿ ದೊರೆಯುವ ಯೋಜನೆಗಳ ಬಗ್ಗೆ
ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕಿ ಜಿ.ಪಿ. ರೇಖಾ, ಕೃಷಿ ಇಲಾಖಾ ಯೋಜನೆಗಳ ಬಗ್ಗೆ ಸಹಾಯಕ ಕೃಷಿ ನಿದೇರ್ಶಕಿ ಪ್ರತಿಮಾ ಮಾಹಿತಿ ನೀಡಿದರು.
ಕೆಂಚಿಕೊಪ್ಪ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಶ್ರೀ ಗಿರೀಶ್, ವ್ಯವಸಾಯ ಸೇವಾ ಸಹಕಾರ ಸಂಘದ ಅಧ್ಯಕ್ಷ ಕೋಮೇಶಣ್ಣ, ಮಾಜಿ ಎಪಿಎಂಸಿ ಅಧ್ಯಕ್ಷ ಸುರೇಶ್, ಅವಳಿ ತಾಲ್ಲೂಕಿನ ಕೃಷಿಕ ಸಮಾಜದ ಅಧ್ಯಕ್ಷರು,ಸದ್ಯಸರು ತಮ್ಮ ಕೃಷಿಯ ಅನುಭವವನ್ನು ಹಂಚಿಕೊಂಡರು. ಆತ್ಮ ಯೋಜನೆಯ ಸಹ ಯೋಜನಾ ನಿರ್ದೇಶಕ
ಚಂದ್ರಶೇಖರ್ ಪ್ರಾಸ್ತಾವಿಕವಾಗಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಕೃಷಿ ಸಖಿಯರು, ಸ್ತ್ರೀಶಕ್ತಿ ಸಂಘದ ಮಹಿಳೆಯರು, ಕೃಷಿ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಹಾಗೂ150 ಕ್ಕೂ ಹೆಚ್ಚು ರೈತರು ಭಾಗವಹಿಸಿದ್ದರು.



