ಹರಿಹರ: ಕರ್ತವ್ಯಲೋಪ ಆರೋಪದ ಹಿನ್ನೆಲೆ ಹರಿಹರ ನಗರಸಭೆ ಬಿಲ್ ಕಲೆಕ್ಟರ್ ಅಣ್ಣಪ್ಪ ಟಿ. ಅಮಾನತು(Suspension) ಮಾಡಿ ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ ಆದೇಶಿಸಿದ್ದಾರೆ.17ರಿಂದ ಆರಂಭವಾಗಿದ್ದ ಬಿ-ಖಾತಾ ಅಭಿಯಾನದಡಿ, ಅರ್ಜಿ ವಿಲೇವಾರಿ ಮಾಡದೇ ವಿಳಂಬ ಮಾಡುತ್ತಿದ್ದ ಆರೋಪ ಬಂದಿತ್ತು. ಈವರೆಗೆ ಅಣ್ಣಪ್ಪ 764 ಅರ್ಜಿಗಳನ್ನು ಸಾರ್ವಜನಿಕರಿಂದ ಸ್ವೀಕರಿಸಿದ್ದಾರೆ ಇದರಲ್ಲಿ ಕೇವಲ120 ಅರ್ಜಿಗಳನ್ನು ಮಾತ್ರ ವಿಲೇವಾರಿ ಮಾಡಿದ್ದು, 644 ಅರ್ಜಿಗಳನ್ನು ಬಾಕಿ ಉಳಿಸಿಕೊಂಡಿರುವುದು ತನಿಖೆಯಿಂದ ಗೊತ್ತಾಗಿದೆ.
ಈ ಹಿಂದೆ ಅಣ್ಣಪ್ಪ ಎರಡು ಬಾರಿ ಕಾರಣ ಕೇಳಿ ನೋಟಿಸ್ ನೀಡಿ ಎಚ್ಚರಿಸಿ, ಸಾರ್ವಜನಿಕರನ್ನು ಅಲೆದಾಡಿಸಬೇಡಿ ಎಂದು ತಾಕೀತು ಮಾಡಲಾಗಿತ್ತು. ಹೀಗಿದ್ದರೂ ಅನುಮತಿ ಇಲ್ಲದೆ ರಜೆಯ ಮೇಲೆ ತೆರಳಿದ್ದರು.
ನಗರಸಭೆಯ ಕಂದಾಯ ಶಾಖೆಯ ಅಧಿಕಾರಿಗಳ ವರದಿ ಹಾಗೂ ಪರಿಶೀಲನೆ ವೇಳೆ ಕಂಡುಬಂದ ಅಂಶಗಳನ್ನು ಪರಿಗಣಿಸಿ ಸೇವೆಯಿಂದ ಅಮಾನತು ಮಾಡಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.



