ದಾವಣಗೆರೆ: ಎಸ್ಸೆಸ್ಸೆಲ್ಸಿ ಪರೀಕ್ಷೆ ಫಲಿತಾಂಶದಲ್ಲಿ ಫೇಲ್ ಆಗುವ ಭಯದಿಂದ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ಜಿಲ್ಲೆಯಲ್ಲಿ ನಡೆದಿದೆ. ಫಲಿತಾಂಶ ದಿನನವಾದ ನಿನ್ನೆ (ಮೇ 09) ಬೆಳಗ್ಗೆಯೇ ಮನೆಯಲ್ಲಿ ವಿದ್ಯಾರ್ಥಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಮಾವಿನಕಟ್ಟೆ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿ ಆರ್.ಕುಶಾಲ್ (16) ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಕುಶಾಲ್ ಕಳೆದ ರಾತ್ರಿ
ಎಲ್ಲರ ಜೊತೆ ಮನೆಯಲ್ಲಿ ನಗುತ್ತಲೇ ಊಟ ಮಾಡಿ, ಮಲಗಿದ್ದ. ಆದರೆ, ಅನುತ್ತೀರ್ಣನಾಗುವ ಭಯದಲ್ಲೇ ರಾತ್ರಿ ಕಳೆದಿದ್ದಾನೆ. ರಾತ್ರಿ ಮಲಗಿದ್ದ ಕುಶಾಲ್ ಇದ್ದಕ್ಕಿದ್ದಂತೆ ಮನೆಯಲ್ಲಿ ನೇಣು
ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಬೆಳಿಗ್ಗೆ ಮನೆ ಯವರು ನೋಡಿದಾಗ ಕುಶಾಲ ನೇಣಿಗೆ ಶರಣಾಗಿರುವುದು ಗೊತ್ತಾಗಿದೆ. ಚನ್ನಗಿರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಫಲಿತಾಂಶ ಪ್ರಕಟಗೊಂಡಾಗ ಕುಶಾಲ್ ಇಂಗ್ಲಿಷ್, ವಿಜ್ಞಾನದಲ್ಲಿ ಅನುತ್ತೀರ್ಣನಾಗಿದ್ದನು. ಕನ್ನಡದಲ್ಲಿ 80 ಅಂಕ, ಇಂಗ್ಲಿಷ್ 29, ಹಿಂದಿ 46, ಗಣಿತ 47, ಸಮಾಜ ವಿಜ್ಞಾನ 47 ಸೇರಿದಂತೆ ಒಟ್ಟು 273 ಅಂಕ ಪಡೆದಿದ್ದಾನೆ. ಮಗನನ್ನು ಕಳೆದುಕೊಂಡ ಹೆತ್ತವರ ಗೊಳಾಟ ಮುಗಿಲುಮುಟ್ಟಿತ್ತು.



