ದಾವಣಗೆರೆ: 2023-24 ನೇ ಸಾಲಿನ ಎಸ್ಸೆಸ್ಸೆಲ್ಸಿ ಫಲಿತಾಂಶ ಪ್ರಕಟವಾಗಿದ್ದು, 625ಕ್ಕೆ 620 ಅಂಕ ಗಳಿಸಿ ಜಿಲ್ಲೆಯ ಇಬ್ಬರೂ ವಿದ್ಯಾರ್ಥಿಗಳು ಅಗ್ರಸ್ಥಾನ ಹಂಚಿಕೊಂಡಿದ್ದಾರೆ. ಚನ್ನಗಿರಿ ತಾ. ತ್ಯಾವಣಿಗೆ ಗ್ರಾಮದ ಪ್ರಕೃತಿ ಪ್ರೌಢಶಾಲೆಯ ಎಂ.ಎನ್.ಸೃಷ್ಟಿ, ದಾವಣಗೆರೆಯ ಶ್ರೀ ಸಿದ್ಧಗಂಗಾ ಪ್ರೌಢಶಾಲೆಯ ಗಾನವಿ ಜಿಲ್ಲೆಯ ಟಾಪರ್‌ಗಳಾಗಿದ್ದಾರೆ.
ದಾವಣಗೆರೆ ಜಿಲ್ಲೆಯು ಎಸ್ಸೆಸ್ಸೆಲ್ಸಿ ಪರೀಕ್ಷೆ ಫಲಿತಾಂಶದಲ್ಲಿ ಈ ಬಾರಿ ಕಳಪೆ ಸಾಧನೆ ಮಾಡಿದೆ. ಕಳೆದ ವರ್ಷ 15ನೇ ಸ್ಥಾನದಿಂದ 23ನೇ ಸ್ಥಾನಕ್ಕೆ ಕುಸಿದಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಸಲ ಶೇ.15ರಷ್ಟು ಫಲಿತಾಂಶದಲ್ಲೂ ಇಳಿಕೆಯಾಗಿದೆ. ಅನುತ್ತೀರ್ಣನಾಗುವ ಭೀತಿಯಿಂದ ಜಿಲ್ಲೆಯ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಜಿಲ್ಲೆಯಲ್ಲಿ ಶೇ.74.28 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. 2023-24ನೇ ಸಾಲಿನಲ್ಲಿ 20,602 ಮಕ್ಕಳು ಪರೀಕ್ಷೆ ಬರೆದಿದ್ದರು. ಈ ಪೈಕಿ 6547 ಬಾಲಕರು, 8756 ಬಾಲಕಿಯರು ಸೇರಿದಂತೆ 15,303 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ಎಂದಿನಂತೆ ಹುಡುಗಿಯರೇ ಮೇಲುಗೈ ಸಾಧಿಸಿದ್ದಾರೆ. ಬಾಲಕಿಯರ ಪೈಕಿ ಶೇ.82.53 ಜನ ಉತ್ತೀರ್ಣರಾದರೆ, ಬಾಲಕರ ಉತ್ತೀರ್ಣ ಪ್ರಮಾಣ ಶೇ.65.52ರಷ್ಟು ಇದೆ.ಕಳೆದ ವರ್ಷ ಶೇ.90.12 ಫಲಿತಾಂಶ ಬಂದಿತ್ತು. ಈ ವರ್ಷ 15ನೇ ಸ್ಥಾನದಿಂದ 23ನೇ ಸ್ಥಾನಕ್ಕೆ ಕುಸಿದಿರುವುದು ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯ ಆತಂಕಕ್ಕೆ ಕಾರಣವಾಗಿದೆ.
- ವಲಯವಾರು ಫಲಿತಾಂಶ
- ದಾವಣಗೆರೆ ದಕ್ಷಿಣ ಶೇ.81.63
- ಚನ್ನಗಿರಿ ಶೇ.70
- ದಾವಣಗೆರೆ ಉತ್ತರ ಶೇ.74.34
- ಹೊನ್ನಾಳಿ ಶೇ.80.72
- ಜಗಳೂರು ಶೇ.70.01
- ಹರಿಹರ ಶೇ.60.05
ಕಳೆದ ಸಾಲಿನಲ್ಲಿ ಜಗಳೂರು ಶೇ.96.42 ಫಲಿತಾಂಶದೊಂದಿಗೆ ಜಿಲ್ಲೆಗೆ ಅಗ್ರಸ್ಥಾನದಲ್ಲಿತ್ತು.ಆಂಗ್ಲ ಮಾಧ್ಯಮ ಶಾಲೆ ಮಕ್ಕಳು ಈ ಸಲದ ಫಲಿತಾಂಶದಲ್ಲಿ ಮೇಲುಗೈ ಸಾಧಿಸಿದ್ದಾರೆ. ಆಂಗ್ಲ ಮಾಧ್ಯಮದಿಂದ ಪರೀಕ್ಷೆ ಬರೆದಿದ್ದ 8619 ಮಕ್ಕಳಲ್ಲಿ 7606 ಮಕ್ಕಳು ಉತ್ತೀರ್ಣರಾಗಿದ್ದು, ಶೇ.80.82 ಫಲಿತಾಂಶ ತಂದಿದ್ದಾರೆ. ಕನ್ನಡ ಮಾಧ್ಯಮದಲ್ಲಿ ಪರೀಕ್ಷೆ ಬರೆದಿದ್ದ 11,245 ಮಕ್ಕಲ್ಲಿ 7214 ಮಕ್ಕಳು ಉತ್ತೀರ್ಣರಾಗಿ, ಶೇ.64.15 ಫಲಿತಾಂಶಕ್ಕೆ ಕಾರಣರಾಗಿದ್ದಾರೆ.
ಗ್ರಾಮೀಣ ಪ್ರದೇಶದ ಮಕ್ಕಳಿಗಿಂತ ನಗರ ಪ್ರದೇಶದ ಮಕ್ಕಳು ಉತ್ತಮ ಫಲಿತಾಂಶ ತಂದಿದ್ದಾರೆ. ನಗರ ಪ್ರದೇಶದ 8024 ಮಕ್ಕಳು ಪರೀಕ್ಷೆ ಬರೆದಿದ್ದು, 6230 ಮಕ್ಕಳು ಉತ್ತೀರ್ಣರಾಗಿ, ಶೇ.77.64 ಫಲಿತಾಂಶ ತಂದಿದ್ದಾರೆ. ಗ್ರಾಮೀಣ ಪ್ರದೇಶದ 12,578 ಮಕ್ಕಳಲ್ಲಿ 9072ಮಕ್ಕಳು ತೇರ್ಗಡೆಯಾಗಿ, ಶೇ.72.13 ಫಲಿತಾಂಶ ತಂದಿದ್ದಾರೆ.
36 ಶಾಲೆಗೆ ಶೇ.100 ಫಲಿತಾಂಶ:ದಾವಣಗೆರೆ ಜಿಲ್ಲೆಯ 36 ಶಾಲೆಗಳಿಗೆ ಶೇ.100 ಫಲಿತಾಂಶ ಬಂದಿದೆ. 9 ಸರ್ಕಾರಿ ಶಾಲೆಗಳು ಸೇರಿದಂತೆ ಜಿಲ್ಲೆಯ ಒಟ್ಟು 36 ಶಾಲೆಗಳಿಗೆ ಶೇ.100 ಫಲಿತಾಂಶ ಬಂದಿದೆ. 26 ಅನುದಾನ ರಹಿತ ಮತ್ತು 1 ಅನುದಾನರಹಿತ ಶಾಲೆಗೆ ಶೇ.100 ಫಲಿತಾಂಶ ಬಂದಿದೆ.
ಮೂರು ಖಾಸಗಿ ಶಾಲೆ ಸಾಧನೆ ಶೂನ್ಯ: ಜಿಲ್ಲೆಯ ಮೂರು ಖಾಸಗಿ ಶಾಲೆಗಳಿಗೆ ಶೂನ್ಯ ಫಲಿತಾಂಶ ಲಭಿಸಿದೆ. ದಾವಣಗೆರೆ ನಗರದ ಭಾರತ್ ಕಾಲನಿಯ ನೇತಾಜಿ ಸುಭಾಶ್ಚಂದ್ರ ಪ್ರೌಢಶಾಲೆ, ಎಸ್ಸೆಸ್ ಬಡಾವೆಯ ಶ್ರೀ ರಾಘವೇಂದ್ರ ವಿದ್ಯಾನಿಕೇತನ ಶಾಲೆ, ಹೊನ್ನಾಳಿ ತಾಲೂಕು ಸಾಸ್ವೇಹಳ್ಳಿಯ ಎಡಿವಿಎಸ್ ಶಾಲೆಯ ಯಾವೊಬ್ಬ ವಿದ್ಯಾರ್ಥಿಯೂ ತೇರ್ಗಡೆಯಾಗಿಲ್ಲ. ಜಿಲ್ಲೆಯ 47 ಶಾಲೆಗಳಿಗೆ ಶೇ.40ಕ್ಕಿಂತ ಕಡಿಮೆ ಫಲಿತಾಂಶ ಲಭಿಸಿದೆ. ಈ ಪೈಕಿ 8 ಸರ್ಕಾರಿ ಶಾಲೆಗಳಾದರೆ, 33 ಅನುದಾನಿತ ಹಾಗೂ 6 ಅನುದಾನ ರಹಿತ ಶಾಲೆಗಳಾಗಿವೆ
ಶೂನ್ಯ, ಕಡಿಮೆ ಫಲಿತಾಂಶ ಶಾಲೆಗಳಿಗೆ ನೋಟೀಸ್ : ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇ.40ಕ್ಕಿಂತ ಕಡಿಮೆ ಹಾಗೂ ಶೂನ್ಯ ಫಲಿತಾಂಶ ಬಂದ ಒಟ್ಟು 50 ಶಾಲೆಗಳಿಗೆ ಕಾರಣ ಕೇಳಿ ನೋಟೀಸ್ ಜಾರಿಗೊಳಿಸುವುದಾಗಿ ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಜಿ.ಕೊಟ್ರೇಶ ಹೇಳಿದರು.
ಸಾರ್ವಜನಿಕ ಶಿಕ್ಚಣ ಇಲಾಖೇ ಉಪ ನಿರ್ದೇಶಕರ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಜಿಲ್ಲೆಯ ಫಲಿತಾಂಶ ಕಳೆದ ಸಾಲಿಗೆ ಹೋಲಿಸಿದರೆ ತುಂಬಾ ಕುಸಿತ ಕಂಡಿದೆ. ಇದನ್ನು ಶಿಕ್ಷಣ ಇಲಾಖೆ ಗಂಭೀರವಾಗಿ ಪರಿಗಣಿಸಿದೆ.ಇಂತಹವುಗಳನ್ನು ಸರಿದೂಗಿಸುವ ನಿಟ್ಟಿನಲ್ಲಿ ಶೇ.40ಕ್ಕಿಂತ ಕಡಿಮೆ ಫಲಿತಾಂಶ ಬಂದ ಶಾಲೆಗಳನ್ನು ಇಲಾಖೆಯ ಅಧಿಕಾರಗಳೇ ದತ್ತು ಪಡೆದು, ಮುಂದಿನ ಸಲ ಫಲಿತಾಂಶ ಸುಧಾರಣೆಗೊಳ್ಳಲು ಕ್ರಮ ಕೈಗೊಳ್ಳುತ್ತೇವೆ ಎಂದು ಸಾಶಿಇ ಉಪ ನಿರ್ದೇಶಕ ಕೊಟ್ರೇಶ್ ಸ್ಪಷ್ಟಪಡಿಸಿದರು