ದಾವಣಗೆರೆ: ಶ್ರೀರಾಮ ಸೇನೆಯಿಂದ ಏಪ್ರೀಲ್ ಕೊನೆಯಲ್ಲಿ ರಾಜ್ಯಾದ್ಯಂತ ಅನಧಿಕೃತ ಮಸೀದಿ ಮೇಲಿನ ಮೈಕ್‍ಗಳನ್ನು ತೆರವುಗೊಳಿಸಲು ಹೋರಾಟ ನಡೆಸಲಾಗುವುದು ಎಂದು ಸೇನೆಯ ರಾಜ್ಯ ಕಾರ್ಯಾಧ್ಯಕ್ಷ ಗಂಗಾಧರ ಕುಲಕರ್ಣಿ ಹೇಳಿದರು.
ರಾಜ್ಯದಲ್ಲಿರುವ ಅನಧಿಕೃತ ಮಸೀದಿಗಳ ಬಗ್ಗೆ ನಮ್ಮ ತಂಡದಿಂದ ಮಾಹಿತಿ ಕಲೆಹಾಕಲಾಗುತ್ತಿದೆ. ರಾತ್ರಿ 10 ರಿಂದ ಬೆಳಿಗ್ಗೆ 6 ರವರೆಗೆ ಯಾವುದೇ ಮೈಕ್ ಹಾಕಬಾರದು ಹಾಕಿದರಾದರೂ ಇಂತಿಷ್ಟು ಡೆಸಿಬಲ್‍ನಲ್ಲಿ ಮಾತ್ರ ಹಾಕಲು ಸುಪ್ರೀಂ ಆದೇಶ ನೀಡಿದೆ. ಸುಪ್ರೀಂ ನಿಯಮ ಪಾಲಿಸುತ್ತಿಲ್ಲ. ಹೀಗಾಗಿ ಇದರ ವಿರುದ್ಧ ಹೋರಾಟ ನಡೆಸಲಾಗುವುದು ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಆಯೋಧ್ಯೆಯ ರಾಮ ಮಂದಿರ ನಿರ್ಮಾಣಕ್ಕೆ ಹಿಂದೂಗಳು ಸಂತೋಷದಿಂದ ಜಾತಿ, ಮತ, ಪ್ರಾಂತವನ್ನು ತೊರೆದು ಸ್ವಯಂ ಪ್ರೇರಣೆಯಾಗಿ ದಾನ ಮಾಡುತ್ತಿದ್ದಾರೆ. ಆದರೆ, ಈ ಕಾರ್ಯಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಟೀಕಿಸಿದ್ದಾರೆ. ಅವರೂ ಮೂಲತಃ ವಕೀಲರೂ ಆಗಿದ್ದರು. ಸುಪ್ರೀಂ ಕೋರ್ಟ್‍ನ ಐವರು ಸದಸ್ಯರ ಪೀಠ ನೀಡಿದ ತೀರ್ಪು ಇವರಿಗೆ ವಿವಾದಿತ ಅನ್ನಿಸುತ್ತಿದಿಯಾ? ತುಷ್ಠಿಕಾರಣ ರಾಜಕಾರಣ ಮಾಡಿ, ಸಮಾಜದಲ್ಲಿ ಹುಳಿ ಹಿಂಡುವ ಕೆಲಸ ಮಾಡುತ್ತಿದ್ದಾರೆ ಎಂದು ದೂರಿದರು.
ಸುದ್ದಿಗೋಷ್ಠಿಯಲ್ಲಿ ಪರಶುರಾಮ ನಡುಮನಿ, ವಿನೋದರಾಜ್, ಜಿಲ್ಲಾಧ್ಯಕ್ಷ ಮಣಿಸರ್ಕಾರ್, ಜಿಲ್ಲಾ ಉಪಾಧ್ಯಕ್ಷ ಆಲೂರು ರಾಜಶೇಖರ್, ಜಿ ಪ್ರಧಾನ ಕಾರ್ಯದರ್ಶಿ ಸಾಗರ್, ಖಜಾಂಚಿ ಶ್ರೀಧರ್, ರಮೇಶ್ ಕರಾಟೆ, ಸುನೀಲ್ ವಾಲಿ, ಪ್ರಭು ಮತ್ತಿತರರು ಇದ್ದರು.



