ದಾವಣಗೆರೆ: ಸಿನಿಮಾ ಸಿರಿ ವತಿಯಿಂದ ಮಾರ್ಚ್ 13 ರಂದು ಸಂಜೆ 6 ಗಂಟೆಗೆ ದಾವಣಗರೆಯ ಜಯದೇವ ವೃತ್ತದಲ್ಲಿರುವ ಶಿವಯೋಗಿ ಮಂದಿರದ ಹೊರಾಂಗಣದಲ್ಲಿ ಖ್ಯಾತ ಹಿನ್ನೆಲೆ ಗಾಯಕ ಡಾ.ಎಸ್.ಪಿ. ಬಾಲಸುಬ್ರಮಣ್ಯಂ ಸಂಸ್ಮರಣೆಗಾಗಿ ಎಸ್.ಪಿ.ಬಿ. “ಗೀತ ನಮನ” ಸುಮಧುರ ಸಂಗೀತ ಸಂಜೆ ಸಮಾರಂಭ ಹಮ್ಮಿಕೊಳ್ಳಲಾಗಿದೆ.
ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಎಂ.ಜಿ. ಜಗದೀಶ್ , ಶಾಸಕ ಶಾಮನೂರು ಶಿವಶಂಕರಪ್ಪ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಯಾಗಿ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ ಭಾಗವಹಿಸಲಿದ್ದಾರೆ. ಕೊರೊನಾದ ಸಂದಿಗ್ಧ ಪರಿಸ್ಥಿತಿಯಲ್ಲಿ ಪ್ರಾಮಾಣಿಕವಾಗಿ ಸಾಮಾಜಿಕ ಕಾಳಜಿಯೊಂದಿಗೆ ಸೇವೆಗೈದ ಹಿನ್ನೆಲೆಯಲ್ಲಿ ಸನ್ಮಾನಿಸಿ ಗೌರವಿಸಲಾಗುವುದು ಎಂದರು.
ಸಮಾರಂಭದ ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷ ಟಿ.ಎಂ.ಪಂಚಾಕ್ಷರಯ್ಯ ವಹಿಸಿಕೊಳ್ಳಲಿದ್ದು, ಇತ್ತೀಚಿಗೆ ರಸ್ತೆ ದುರಂತದಲ್ಲಿ ದುರ್ಮರಣ ಹೊಂದಿದ ದಾವಣಗೆರೆಯ ವನಿತೆಯರಿಗೆ “ಮರೆಯಲಾಗದ ಮಾಣಿಕ್ಯ” ಶೀರ್ಷಿಕೆಯಡಿಯಲ್ಲಿ ಪುಷ್ಪಾಂಜಲಿ ಅರ್ಪಿಸಲಾಗುವುದು ಎಂದು ಸಂಸ್ಥೆಯ ಪರಿಕಲ್ಪನೆ ನಿರ್ದೇಶಕರಾದ ಸುರಭಿ ಶಿವಮೂರ್ತಿ ತಿಳಿಸಿದ್ದಾರೆ.
ಎಸ್ ಪಿ ಬಿ ಅವರ ಜನಪ್ರಿಯ ಹಾಡುಗಳನ್ನು ಭದ್ರಾವತಿಯ ತೃಪ್ತಿ ಮೆಲೋಡಿಯಸ್ ಕಲಾವಿದರು ಮತ್ತು ಸ್ಥಳೀಯ ಕಲಾವಿದರಾದ ವಿದುಷಿ ಸಂಗೀತಾ ರಾಘವೇಂದ್ರ, ಜಗದೀಶ್ ಎಂ.ಜಿ., ಬಿ.ಪೂಜಾ, ಮೃತ್ಯುಂಜಯ ಆರ್.ಟಿ. ಅವರು ಸುಮಧುರ ಸಂಗೀತ ರಸಮಂಜರಿ ನಡೆಸಿಕೊಡಲಿದ್ದಾರೆ ಎಂದು ಖಜಾಂಚಿ ಹೆಚ್.ವಿ.ಮಂಜುನಾಥ್ ಸ್ವಾಮಿ ತಿಳಿಸಿದ್ದಾರೆ.
ಸಂಗೀತಾಸಕ್ತ ಸಾರ್ವಜನಿಕರಿಗೆ ಉಚಿತ ಪ್ರವೇಶವಿದ್ದು, ಗೀತ ನಮನ ಕಾರ್ಯಕ್ರಮಕ್ಕೆ ಮಾಸ್ಕ್, ಸಾಮಾಜಿಕ ಅಂತರವನ್ನು ಕಾಪಾಡಿಕೊಂಡು ಆಗಮಿಸಿ ಸಮಾರಂಭ ಯಶಸ್ವಿಗೊಳಿಸಬೇಕಾಗಿ ವಿನಂತಿಸಿದ್ದಾರೆ.



