ದಾವಣಗೆರೆ: ದಾವಣಗೆರೆ ಜಿಲ್ಲಾಡಳಿತ ಭವನದ ಪಕ್ಕದಲ್ಲಿ 15.85 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿರುವ ಸ್ಮಾರ್ಟ್ ಸಿಟಿ ಕಚೇರಿ ನೂತನ ಕಟ್ಟಡವನ್ನು ನಗರಾಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಬಸವರಾಜ ಉದ್ಘಾಟಿಸಿದರು.
ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಸ್ಮಾರ್ಟ್ ಸಿಟಿ ಕಚೇರಿ ಇದುವರೆಗೂ ಖಾಸಗಿ ಕಟ್ಟಡದಲ್ಲಿ ಕಾರ್ಯ ನಿರ್ವಹಿಸುತ್ತಿತ್ತು. ಕಟ್ಟಡದ ನೆಲಮಹಡಿ ಸಿದ್ದಗೊಂಡಿರುವ ಕಾರಣಕ್ಕಾಗಿ ಕಚೇರಿಯನ್ನು ನೂತನ ಕಟ್ಟಡಕ್ಕೆ ಸ್ಥಳಾಂತರವಾಗುವಂತೆ ಮಾಡಲು ಸಾಂಕೇತಿಕವಾಗಿ ಉದ್ಘಾಟಿಸಲಾಗಿದೆ. ಕಚೇರಿಯನ್ನು ಸ್ವಂತ ಕಟ್ಟಡಕ್ಕೆ ಸ್ಥಳಾಂತರ ಮಾಡುವುದರಿಂದ ಖಾಸಗಿ ಕಟ್ಟಡದ ಬಾಡಿಗೆ ಮೊತ್ತವನ್ನು ಸರ್ಕಾರಕ್ಕೆ ಉಳಿತಾಯ ಮಾಡಿದಂತಾಗಲಿದೆ. ಕಟ್ಟಡ ಸಂಪೂರ್ಣಗೊಂಡ ಬಳಿಕ, ಮುಖ್ಯಮಂತ್ರಿಗಳನ್ನು ಆಹ್ವಾನಿಸಿ, ಇನ್ನೊಮ್ಮೆ ಪೂರ್ಣ ಪ್ರಮಾಣದಲ್ಲಿ ಉದ್ಘಾಟನೆ ಸಮಾರಂಭ ಏರ್ಪಡಿಸಲಾಗುವುದು. ಕಟ್ಟಡದ ಸಾಂಕೇತಿಕ ಉದ್ಘಾಟನೆ ನೆರವೇರಿಸುವುದರ ಜೊತೆಗೆ ಸ್ಮಾರ್ಟ್ ಸಿಟಿ ಯೋಜನೆಯಡಿ ಅಗ್ನಿಶಾಮಕದಳಕ್ಕೆ 01 ಕೋಟಿ ರೂ. ವೆಚ್ಚದಲ್ಲಿ ಆಧುನಿಕ ಅಗ್ನಿಶಾಮಕ ವಾಹನ ಹಾಗೂ ಪೂರಕ ಉಪಕರಣಗಳನ್ನು ನೀಡಲಾಗಿದೆ ಎಂದರು.
ಸಂಸದ ಜಿ.ಎಂ. ಸಿದ್ದೇಶ್ವರ, ಶಾಸಕ ಎಸ್.ಎ. ರವೀಂದ್ರನಾಥ್, ದೂಡಾ ಅಧ್ಯಕ್ಷ ಎನ್.ಹೆಚ್. ಶಿವಕುಮಾರ್, ಮಹಾನಗರಪಾಲಿಕೆ ಮಹಾಪೌರ ಎಸ್.ಟಿ. ವೀರೇಶ್, ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ, ಸ್ಮಾರ್ಟ್ ಸಿಟಿ ಯೋಜನೆ ವ್ಯವಸ್ಥಾಪಕ ನಿರ್ದೇಶಕ ರವೀಂದ್ರ ಮಲ್ಲಾಪುರ, ಮಹಾ ನಗರಪಾಲಿಕೆ ಸದಸ್ಯೆ ಉಮಾ, ಅಗ್ನಿಶಾಮಕದಳ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.



