ದಾವಣಗೆರೆ: ಅಮೃತ ಮಹೋತ್ಸವ ಕಾರ್‍ಯಕ್ರಮ ಮುಂದಿನ ಮುಖ್ಯಮಂತ್ರಿ ಎಂದು ಬಿಂಬಿಸುವ ಕಾರ್‍ಯಕ್ರಮ ಅಲ್ಲ. ಮುಖ್ಯಮಂತ್ರಿಯನ್ನು ಪಕ್ಷದ ಹೈಕಮಾಂಡ್, ಶಾಸಕರು ಆಯ್ಕೆ ಮಾಡುತ್ತಾರೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದರು.
ದಾವಣಗೆರೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾವು ಯಾರೂ ಸಿದ್ದರಾಮೋತ್ಸವ ಎಂದು ಕರೆದೇ ಇಲ್ಲ. ಮಾಧ್ಯಮದವರು ಮತ್ತು ಆರ್‌ಎಸ್ ಎಸ್ ಸಿದ್ದರಾಮೋತ್ಸವ ಎಂದು ಕರೆದವರು. ನಾನು ಎಂದಿಗೂ ಜನ್ಮ ದಿನ ಆಚರಿಸಿಕೊಂಡಿಲ್ಲ. ಮುಂದೆಯೂ ಆಚರಿಸಿಕೊಳ್ಳುವುದಿಲ್ಲ ಎಂದರು.
ದಾವಣಗೆರೆಯಲ್ಲಿ 2012 ರಲ್ಲಿ ಹಾಲುಮತ ಮಹೋತ್ಸವ ಮಾಡಲಾಗಿತ್ತು. ಈಗ ಅಮೃತ ಮಹೋತ್ಸವ ಕಾರ್‍ಯಕ್ರಮ ಮಾಡಲಾಗುತ್ತಿದೆ. ಅದೇ ಬೇರೆ. ಇದೇ ಬೇರೆ. ಅಮೃತ ಮಹೋತ್ಸವ ಕಾರ್‍ಯಕ್ರಮದಿಂದ ಈಗಾಗಲೇ ಬಿಜೆಪಿ ಯವರಿಗೆ ಭಯ ಪ್ರಾರಂಭವಾಗಿದೆ. ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಮಂತ್ರಿ ಸ್ಥಾನ ಕಳೆದುಕೊಂಡ ಮೇಲೆ ಮಾನಸಿಕ ಆರೋಗ್ಯ ಸ್ಥಿರವಾಗಿಲ್ಲ. ಹಾಗಾಗಿಯೇ ಏನೇನೋ ಮಾತನಾಡುತ್ತಿದ್ದಾರೆ ಎಂದರು.
ದಾವಣಗೆರೆಯಲ್ಲಿ ವಿಜೃಂಭಣೆಯಿಂದ ಅಮೃತ ಮಹೋತ್ಸವ ಕಾರ್‍ಯಕ್ರಮ ಮಾಡುತ್ತಿದ್ದಾರೆ. ಮುಂದಿನ ಚುನಾವಣೆ ದೃಷ್ಟಿಯಲ್ಲಿಟ್ಟುಕೊಂಡು ಈ ಕಾರ್‍ಯಕ್ರಮ ಮಾಡುತ್ತಿಲ್ಲ. ಚುನಾವಣೆ ಇನ್ನೂ 8 ತಿಂಗಳಿದೆ.ದಾವಣಗೆರೆಯಲ್ಲಿ ಅಮೃತ ಮಹೋತ್ಸವ ಕಾರ್‍ಯಕ್ರಮದ ನಂತರ ಕಾಂಗ್ರೆಸ್ ಹೋಳಾಗಲಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಇತರರು ಹೇಳಿದ್ದಾರೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಬಿಜೆಪಿಯವರಿಗೆ ಈಗಿನಿಂದಲೇ ಭಯ ಪ್ರಾರಂಭವಾಗಿದೆ ಎಂದರು.



