ದಾವಣಗೆರೆ: ವೀರಶೈವ ಮಹಾಸಭಾದಿಂದ ಸಮಾಜದ ಎಲ್ಲ ಒಳ ಪಂಗಡ ಒಗ್ಗೂಡಿಸುವ ಕೆಲಸ ನಡೆಯುತ್ತಿದ್ದು, ಒಳಪಂಗಡ ಮರೆತು ಎಲ್ಲರೂ ಒಗ್ಗಟ್ಟಿನಿಂದ ಮುನ್ನಡೆಯಬೇಕು. ಇದರಿಂದ ಸಮಾಜಕ್ಕೆ ಶಕ್ತಿ ಬರಲಿದೆ ಎಂಬುದು ನಮ್ಮ ಆಶಯ. ಆದರೆ, ಸ್ವಾಮೀಜಿಗಳೇ ಒಳಪಂಗಡಗಳ ಹೆಸರಿನಲ್ಲಿ ಸಮಾಜ ಒಡೆಯುವ ಕೆಲಸ ಮಾಡುತ್ತಿದ್ದಾರೆ ಎಂದು ವೀರಶೈವ ಲಿಂಗಾಯತ ಮಹಾ ಸಭಾ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ಹೇಳಿದರು.
ಜಿಲ್ಲಾ ವೀರಶೈವ ಲಿಂಗಾಯತ ಪಂಚಮಸಾಲಿ ಸಂಘ, ಹರ ಸೇವಾ ಸಂಸ್ಥೆ ಹಾಗೂ ವೀರಶೈವ ಲಿಂಗಾಯತ ಪಂಚಮಸಾಲಿ ಜಗದ್ಗುರು ಪೀಠದ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕೇಂದ್ರ ಸರ್ಕಾರ ರಾಜ್ಯದ ಸಮಗ್ರ ವೀರಶೈವ ಲಿಂಗಾಯತ ಸಮಾಜಕ್ಕೆ ಒಬಿಸಿ ಮೀಸಲಾತಿ ಕಲ್ಪಿಸಬೇಕು ಎಂಬುದು ವೀರಶೈವ ಲಿಂಗಾಯತ ಮಹಾಸಭಾದ ಪ್ರಮುಖ ಬೇಡಿಕೆ. ಚುನಾವಣೆಯಲ್ಲಿ ಮೂರು ಪಕ್ಷಗಳಿಂದ ಆಯ್ಕೆಯಾದ ಸಮಾಜದ 74 ಶಾಸಕರಿಗೆ ಮಹಾಸಭಾದಿಂದ ಸನ್ಮಾನ ಕಾರ್ಯಕ್ರಮ ನಡೆಸುವ ಮೂಲಕ ಒಬಿಸಿ ಮೀಸಲಾತಿ ಹೋರಾಟಕ್ಕೆ ಬೆಂಬಲಿಸಲು ತಿಳಿಸಲಾಗಿದೆ ಎಂದು ಹೇಳಿದರು.



