ದಾವಣಗೆರೆ: ಹಿರಿಯ ಶಾಸಕ, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ರಾಷ್ಟ್ರೀಯ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ (95) ವಯೋಸಹಜ ಅನಾರೋಗ್ಯದಿಂದ ಇಂದು (ಡಿ.14) ನಿಧನ ಹೊಂದಿದ್ದಾರೆ.
ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ, ದಾವಣಗೆರೆ ದಕ್ಷಿಣ ಕ್ಷೇತ್ರದ ಶಾಸಕ ಶಾಮನೂರು ಶಿವಶಂಕರಪ್ಪ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ವಿಧಿವಶರಾಗಿದ್ದಾರೆ. ಅನಾರೋಗ್ಯದ ಕಾರಣ ಆಸ್ಪತ್ರೆಗೆ ದಾಖಲಾಗಿದ್ದ ಶಾಮನೂರು ಶಿವಶಂಕರಪ್ಪ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಕೆಪಿಸಿಸಿ ಖಜಾಂಚಿಯಾಗಿ ಬಹಳ ವರ್ಷದಿಂದ ಕಾರ್ಯ ನಿರ್ವಹಿಸಿದ್ದರು. ಆರು ಬಾರಿ ಶಾಸಕರು, ಒಂದು ಬಾರಿ ಸಂಸದರಾದ ಶಾಮನೂರು ಶಿವಶಂಕರಪ್ಪ ಸಚಿವರಾಗಿಯೂ ಕಾರ್ಯ ನಿರ್ವಹಿಸಿದ್ದಾರೆ. ದಾವಣಗೆರೆಯಲಗಲಿ ಅಪ್ಪಾಜಿ ಎಂದು ಖ್ಯಾತಿ ಪಡೆದಿದ್ದರು. ಒಂದು ರೀತಿ ದಾವಣಗೆರೆಯ ದೊಡ್ಡ ಶಕ್ತಿ ಅಸ್ತಂಗತವಾಗಿದೆ. ಅವರು ಸಮಾಜ ಸೇವೆ, ಶಿಕ್ಷಣ, ಉದ್ಯಮ, ಧಾರ್ಮಿಕ, ರಾಜಕೀಯ, ವೈದ್ಯಕೀಯ ಹೀಗೆ ಹಲವು ಕ್ಷೇತ್ರದಲ್ಲಿ ಛಾಪು ಮೂಡಿಸಿದ್ದರು.
ಪ್ರಸ್ತುತ ಅವರ ಪುತ್ರ ಎಸ್.ಎಸ್. ಮಲ್ಲಿಕಾರ್ಜುನ ತೋಟಗಾರಿಕೆ ಸಚಿವರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸೊಸೆ ಪ್ರಭಾ ಮಲ್ಲಿಕಾರ್ಜುನ ಸಂಸದರಾಗಿದ್ದಾರೆ. ನಾಲ್ವರು ಪುತ್ರಿಯರು ಹಾಗೂ ಮೂವರು ಪುತ್ರರನ್ನು ಅಗಲಿದ್ದಾರೆ. ದಾವಣಗೆರೆಯ ಅಪಾರ ಬಂಧು ಬಳಗ ಅಗಲಿದ್ದು, ಶಾಮನೂರು ಶಿವಶಂಕರಪ್ಪ ದಾವಣಗೆರೆ ನಿವಾಸದಲ್ಲಿ ಅಭಿಮಾನಿಗಳು ಆಗಮಿಸಿ ಕಣ್ಣೀರು ಹಾಕುತ್ತಿದ್ದಾರೆ. ಇಡೀ ದಾವಣಗೆರೆಯಲ್ಲಿ ಮೌನ ಆವರಿಸಿದೆ.
ಶಾಮನೂರು ಶಿವಶಂಕರಪ್ಪ ನಡೆದು ಬಂದ ದಾರಿ
- 1931 ಜೂನ್ 16ರಂದು ಶಾಮನೂರು ಕಲ್ಲಪ್ಪ-ಸಾವಿತ್ರಮ್ಮ ದಂಪತಿ ಪುತ್ರರಾಗಿ ಜನನ. ತಂದೆಯ ಶಾಮನೂರು ಕಲ್ಲಪ್ಪ ಅಂಡ್ ಸನ್ಸ್’ ಅಂಗಡಿಯಲ್ಲಿ ವ್ಯಾಪಾರ, ಉದ್ಯಮಿಯಾಗಿ ಬೆಳವಣಿಗೆ
- 1954ರಲ್ಲಿ ಚನ್ನಗಿರಿ ತಾಲ್ಲೂಕಿನ ವಡ್ನಾಳ್ ಗ್ರಾಮದ ಪಾರ್ವತಮ್ಮ ಅವರೊಂದಿಗೆ ವಿವಾಹ
- ದಂಪತಿಗೆ ಮೂವರು ಪುತ್ರರು, ನಾಲ್ವರು ಪುತ್ರಿಯರು
- 1969ರಲ್ಲಿ ನಗರಸಭಾ ಸದಸ್ಯರಾಗಿ ಮೊದಲ ಬಾರಿಗೆ ಆಯ್ಕೆ
- 1971 ರಲ್ಲಿ ನಗರಸಭಾ ಸದಸ್ಯರಾಗಿ ಪುನರಾಯ್ಕೆ
- 1972ರಲ್ಲಿ ಬಾಪೂಜಿ ವಿದ್ಯಾಸಂಸ್ಥೆಯ ಗೌರವ ಕಾರ್ಯದರ್ಶಿ
- 1971ರಿಂದ 73ರವರೆಗೆ ದಾವಣಗೆರೆ ನಗರಸಭೆ ಅಧ್ಯಕ್ಷ
- 1978-80 ಕಾಂಗ್ರೆಸ್ ಚಿತ್ರದುರ್ಗ ಜಿಲ್ಲಾ ಘಟಕದ ಅಧ್ಯಕ್ಷ
- 1994-1998 ದಾವಣಗೆರೆ ಕ್ಷೇತ್ರದ ವಿಧಾನಸಭಾ ಸದಸ್ಯ
- 1998-99 ದಾವಣಗೆರೆ ಲೋಕಸಭಾ ಸದಸ್ಯ
- 1999 ಲೋಕಸಭಾ ಚುನಾವಣೆಯಲ್ಲಿ ಸೋಲು
- 2003 ದಾವಣಗೆರೆ ವಿಧಾನಸಭಾ ಕ್ಷೇತ್ರದಿಂದ ಆಯ್ಕೆ
- 2008 ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದಿಂದ ಆಯ್ಕೆ
- 2013 ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದಿಂದ ಆಯ್ಕೆ
- ಸಿದ್ದರಾಮಯ್ಯ ನೇತೃತ್ವದ ಸರ್ಕಾರದಲ್ಲಿ ತೋಟಗಾರಿಕೆ, ಎಪಿಎಂಸಿ ಸಚಿವ
- 2018ರಲ್ಲಿ ದಾವಣಗೆರೆ ದಕ್ಷಿಣ ಕ್ಷೇತ್ರದಿಂದ ವಿಧಾನಸಭೆಗೆ ಆಯ್ಕೆ
- 2023ರಲ್ಲಿ ದಾವಣಗೆರೆ ದಕ್ಷಿಣ ಕ್ಷೇತ್ರದಿಂದ ವಿಧಾನಸಭೆಗೆ ಆಯ್ಕೆ
- ಕೆಪಿಸಿಸಿ ಖಾಯಂ ಖಜಾಂಚಿಯಾಗಿ ಬಹು ವರ್ಷ ಸೇವೆ



