ದಾವಣಗೆರೆ: ಸರ್ಕಾರ ಪ್ರತಿ 1 ಟನ್ ಮರಳಿಗೆ ರೂ.850 ನಂತೆ ದರ ನಿಗದಿ ಮಾಡಿದೆ. ಜಿಲ್ಲೆಯಲ್ಲಿ 24 ಮರಳು ಬ್ಲಾಕ್ ಗಳನ್ನು ಗುರುತಿಸಿ ಟೆಂಡರ್ ಅಂತಿಮಗೊಳಿಸಲಾಗಿದೆ ಎಂದು ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ ತಿಳಿಸಿದರು.
ಡಿಸೆಂಬರ್ ಅಂತ್ಯಕ್ಕೆ ಮರಳು ಲಭ್ಯ
ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲಾ ಮರಳು ಉಸ್ತುವಾರಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಜಿಲ್ಲೆಯಲ್ಲಿ ಅಕ್ರಮ ಮರಳು ಗಣಿಗಾರಿಕೆ ಕುರಿತು ಹಲವು ದೂರುಗಳು ಕೇಳಿ ಬರುತ್ತಿವೆ. ಹಾಗಾಗಿ ಅಂತವರ ಮೇಲೆ ಕಾನೂನಾತ್ಮಕ ಕಠಿಣ ಕ್ರಮ ಕೈಗೊಳ್ಳಬೇಕು. ಹಾಗೆಯೇ ನಿಯಮಾನುಸಾರ ವೇ-ಬ್ರಿಡ್ಜ್ಗಳಲ್ಲಿ ತೂಕ ನಿರ್ದಿಷ್ಟವಾಗಿದ್ದರೂ, ತದನಂತರ ನಿಗದಿತ ತೂಕಕ್ಕಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಅಕ್ರಮವಾಗಿ ಸಾಗಾಣೆ ಮಾಡಲಾಗುತ್ತಿದೆ. ಅಷ್ಟೇ ಅಲ್ಲದೇ ವಾಹನಗಳ ಮೇಲ್ಪದರಗಳಲ್ಲಿ ಎಂಸ್ಯಾಂಡ್ ಮತ್ತು ಮಧ್ಯ ಭಾಗದಲ್ಲಿ ಮರಳು ತುಂಬಿ, ಎಂಸ್ಯಾಂಡ್ ರೂಪದಲ್ಲಿ ಮರಳು ಸಾಗಾಣೆ ಮಾಡುತ್ತಿರುವ ಬಗ್ಗೆ ದೂರುಗಳಿವೆ. ಈ ಕುರಿತು ಸೂಕ್ಷ್ಮವಾಗಿ ಗಮನಿಸಿ ನಿರ್ದಾಕ್ಷಿಣ್ಯವಾಗಿ ಕ್ರಮಕೈಗೊಳ್ಳಬೇಕು.ಡಿಸೆಂಬರ್ ಅಂತ್ಯದ ವೇಳೆಗೆ ಮನೆ ನಿರ್ಮಾಣ ಹಾಗೂ ಇನ್ನಿತರೆ ಕಾಮಗಾರಿಗಳಿಗೆ ಮರಳು ಲಭ್ಯವಾಗಲಿದೆ ಎಂದು ಮಾಹಿತಿ ನೀಡಿದರು.
19 ಬ್ಲಾಕ್ ಸಾರ್ವಜನಿಕ ಉಪಯೋಗಕ್ಕೆ ಲಭ್ಯ
ಜಿಲ್ಲಾದ್ಯಾಂತ ಒಟ್ಟು 24 ಮರಳು ಬ್ಲಾಕ್‍ಗಳನ್ನು ಗುರುತಿಸಲಾಗಿದೆ. ಈ ಪೈಕಿ 4 ಬ್ಲಾಕ್ ಸರ್ಕಾರಿ ಕಾಮಗಾರಿಗಳಿಗೆ, 19 ಬ್ಲಾಕ್‍ಗಳು ಸಾರ್ವಜನಿಕ ಉಪಯೋಗಕ್ಕೆ ನಿಗದಿಪಡಿಸಿದ್ದು, ಟೆಂಡರ್ ಅಂತಿಮವಾಗಿದೆ. ಇನ್ನೂ ಒಂದು ಬ್ಲಾಕ್ ಮಾತ್ರ ಬಾಕಿ ಇದೆ. ಟೆಂಡರ್‍ದಾರರು ಷರತ್ತುಗಳನ್ವಯ ಮರಳು ಪೂರೈಕೆ ಮಾಡಲಾಗುತ್ತದೆ.
ಎಲ್ಲೆಲ್ಲಿ ಬ್ಲಾಕ್ ಗಳು..?
ಹರಿಹರ ತಾಲ್ಲೂಕಿನ ಗೋವಿನಾಳು, ಎಲೆಹೊಳೆ, ಚಿಕ್ಕಬಿದರೆ, ಗುತ್ತೂರು, ಮಳಲಹಳ್ಳಿ ಹಾಗೂ ಬಿಲಾಸನೂರು
ಹೊನ್ನಾಳಿ ತಾಲ್ಲೂಕಿನ ಬುಳ್ಳಾಪುರ, ಚಿಕ್ಕಬಸಾಪುರ, ರಾಂಪುರ, ಬಿಳೆಮಲ್ಲೂರು, ಹಿರೇಬಸೂರು, ಬುಳ್ಳಾಪುರ, ಬೀರಗೊಂಡನಹಳ್ಳಿ ಮತ್ತು ಬಾಗೇವಾಡಿ
ನ್ಯಾಮತಿ ತಾಲ್ಲೂಕಿನಲ್ಲಿ ಗೋವಿನಕೋವಿ, ಮಾರಿಗೊಂಡನಹಳ್ಳಿ, ತಗ್ಗಿಹಳ್ಳಿ ಮತ್ತು ಕೋಟೆಹಾಳ್
ಕೆರೆ ಹೂಳು ಮಣ್ಣು ಬಳಸಿಕೊಳ್ಳಲು ರೈತರಿಗೆ ಮುಕ್ತ ಅವಕಾಶ
ಕೆರೆ ಹೂಳೆತ್ತುವ ವೇಳೆ ತೆಗೆಯುವ ಮಣ್ಣನ್ನು ರೈತರು ಕೃಷಿ ಚಟುವಟಿಕೆಗಳಿಗೆ ಬಳಸಿಕೊಳ್ಳಬಹುದು.ಜಿಲ್ಲೆಯಲ್ಲಿರುವ ಯಾವುದೇ ಕೆರೆಗಳಲ್ಲಿ ರೈತರು ತಮ್ಮ ತೋಟ, ಹೊಲಗಳಿಗೆ ಮಣ್ಣು ಬಳಸಿಕೊಳ್ಳಬಹುದು. ಇದರಿಂದ ಕೆರೆಯ ನೀರಿನ ಸಂಗ್ರಹಣಾ ಸಾಮರ್ಥ್ಯ ಹೆಚ್ಚುವ ಜೊತೆಗೆ ರೈತರ ಜಮೀನಿನ ಫಲವತ್ತತೆ ಹೆಚ್ಚಿ ರಸಗೊಬ್ಬರಗಳ ಬಳಕೆ ಪ್ರಮಾಣ ಕಡಿಮೆ ಮಾಡುವರು. ಆದರೆ ಆಳವಾಗಿ ತೆಗೆಯಲು ಮತ್ತು ವಾಣಿಜ್ಯ ಉದ್ದೇಶಕ್ಕೆ ಬಳಕೆ ಮಾಡುವಂತಿಲ್ಲ, ಮಾಡಿದಲ್ಲಿ ರಾಜಧಾನ ಪಾವತಿ ಮತ್ತು ಅನುಮತಿ ಪಡೆದುಕೊಳ್ಳಬೇಕಾಗುತ್ತದೆ. ಆದರೆ ಕೃಷಿ ಚಟುವಟಿಕೆಗಳಿಗೆ ಅನುಮತಿ ಬೇಕಿಲ್ಲ ಎಂದು ಸಷ್ಟಪಡಿಸಿದರು.
ಆದ್ದರಿಂದ ಅಧಿಕಾರಿಗಳು ತಾಲ್ಲೂಕುವಾರು ಊಳೆತ್ತಲು ಅರ್ಹವಿರುವ ಕೆರೆಗಳ ಸಮಗ್ರ ವರದಿ ಒಂದು ವಾರದೊಳಗೆ ನೀಡಬೇಕೆಂದು ಅಧಿಕಾರಿಗಳಿಗೆ ತಿಳಿಸಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಗಿತ್ತೆ ಮಾಧವ ವಿಠ್ಠಲರಾವ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್, ಅಪರ ಜಿಲ್ಲಾಧಿಕಾರಿ ಶೀಲವಂತ ಶಿವಕುಮಾರ್ ಹಾಗೂ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.