ದಾವಣಗೆರೆ: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ ‘ಸಕಾಲ ಯೋಜನೆ’ ಜಾರಿಯಾಗಿ ಹತ್ತು ವರ್ಷ ಪೂರೈಸಿದ ಹಿನ್ನಲೆಯಲ್ಲಿ ಬುಧವಾರ ದಾವಣಗೆರೆ ತಾಲ್ಲೂಕು ಕಚೇರಿಯಿಂದ ಹಮ್ಮಿಕೊಂಡಿದ್ದ ದಶಮಾನೋತ್ಸವ ಆಚರಣೆ ಜಾಥಾಕ್ಕೆ ಅಪರ ಜಿಲ್ಲಾಧಿಕಾರಿ ಪೂಜಾರ್ ವೀರಮಲ್ಲಪ್ಪ ಹಸಿರು ನಿಶಾನೆ ತೋರಿಸುವುದರ ಮೂಲಕ ಚಾಲನೆ ನೀಡಿದರು.
ನಂತರ ಮಾತನಾಡಿದ ಅವರು, ಸರ್ಕಾರದ ಆದೇಶದಂತೆ ರಾಜ್ಯದ ನಾಗರಿಕರಿಗೆ ನಿಗದಿತ ಕಾಲ ಮಿತಿಯಲ್ಲಿ ಸರ್ಕಾರದ ಸೇವೆಗಳನ್ನು ಒದಗಿಸುವ ಸಕಾಲ ಯೋಜನೆಯ ಕುರಿತು ಜನರಿಗೆ ಜಾಗೃತಿ ಮೂಡಿಸುವ ಸಲುವಾಗಿ ಜಾಥಾಕ್ಕೆ ಚಾಲನೆ ನೀಡಲಾಗಿದೆ. ಒಟ್ಟು 91 ಇಲಾಖೆಗಳ 1115 ಸೇವೆಗಳನ್ನು ಈ ಯೋಜನೆಯಿಂದ ಈಗಾಗಲೇ ಒದಗಿಸಲಾಗುತ್ತಿದೆ. ಹಾಗಾಗಿ ಜನರು ಸಕಾಲ ಯೋಜನೆಯ ಮಾಹಿತಿ ಪಡೆದು ಸೇವೆಗಳನ್ನು ಪಡೆಯಬೇಕು ಎಂದರು.
ಜಾಥಾ ತಹಶೀಲ್ದಾರ್ ಕಛೇರಿಯಿಂದ ಪ್ರಾರಂಭವಾಗಿ ಪಿ.ಬಿ ರಸ್ತೆಯ ಮೂಲಕ ಗಾಂಧೀ ವೃತ್ತ ಮಾರ್ಗವಾಗಿ ಜಯದೇವ ವೃತ್ತದವರೆಗೆ ಸಾಗಿತು. ಇದೇ ಸಂದರ್ಭದಲ್ಲಿ ದಾವಣಗೆರೆ ಉಪವಿಭಾಗಾಧಿಕಾರಿ ಮಮತ ಹೊಸಗೌಡರ್, ತಹಶೀಲ್ದಾರ್ ಬಸವನಗೌಡ ಕೊಟ್ಟೂರು, ಬಿಇಒ ಅಂಬಣ್ಣ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ಶಿಕ್ಷಕರು, ತಾಲ್ಲೂಕು ಕಚೇರಿ ಸಿಬ್ಬಂದಿಗಳು ಸೇರಿದಂತೆ ಇತರರು ಭಾಗವಹಿಸಿದ್ದರು.



