Connect with us

Dvgsuddi Kannada | online news portal | Kannada news online

ದಾವಣಗೆರೆ: 75 ನೇ ಗಣರಾಜ್ಯೋತ್ಸವ ಸಂಭ್ರಮ; ಸರ್ವರಿಗೂ ಸಮಪಾಲು, ಸಮಬಾಳು ತತ್ವದಡಿ ಸರ್ಕಾರ; ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್

ದಾವಣಗೆರೆ

ದಾವಣಗೆರೆ: 75 ನೇ ಗಣರಾಜ್ಯೋತ್ಸವ ಸಂಭ್ರಮ; ಸರ್ವರಿಗೂ ಸಮಪಾಲು, ಸಮಬಾಳು ತತ್ವದಡಿ ಸರ್ಕಾರ; ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್

ದಾವಣಗೆರೆ: ಬುದ್ಧ, ಬಸವ ಹಾಗೂ  ಅಂಬೇಡ್ಕರ್  ಆಶಯದಂತೆ ಸರ್ವರಿಗೂ ಸಮಪಾಲು, ಸಮಬಾಳು ತತ್ವದಡಿ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸರ್ಕಾರಿ ಸೌಲಭ್ಯಗಳು ಸಿಗಬೇಕು. ನೀಡಿದ ಭರವಸೆಯಂತೆ 5 ಗ್ಯಾರಂಟಿಗಳನ್ನು ಅನುಷ್ಟಾನ ಮಾಡಿ ನುಡಿದಂತೆ ನಡೆಯಲಾಗಿದೆ ಎಂದು ಗಣಿ ಮತ್ತು ಭೂ ವಿಜ್ಞಾನ, ತೋಟಗಾರಿಕೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಎಸ್.ಮಲ್ಲಿಕಾರ್ಜುನ್ ತಿಳಿಸಿದರು.

ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ್, ಮಹಾನಗರ ಪಾಲಿಕೆಯಿಂದ ಆಯೋಜಿಸಲಾದ 75 ನೇ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ರಾಷ್ಟ್ರಧ್ವಜಾರೋಹಣ ನೆರವೇರಿಸಿ ಆಕರ್ಷಕ ಪಥಸಂಚಲನದ ಗೌರವ ವಂದನೆ ಸ್ವೀಕರಿಸಿ ತಮ್ಮ ಸಂದೇಶದಲ್ಲಿ ಮಾತನಾಡಿದರು. ಪ್ರಜಾಪ್ರಭುತ್ವದ ಆಶಯವನ್ನು ಎತ್ತಿ ಹಿಡಿಯುವ ಪವಿತ್ರ ಗ್ರಂಥ ಸಂವಿಧಾನವಾಗಿದ್ದು, ಯಾವುದೇ ಸವಾಲುಗಳು ಬಂದರೂ ಸಂವಿಧಾನದಲ್ಲಿ ಪರಿಹಾರೋಪಾಯಗಳಿವೆ. ರಾಷ್ಟ್ರೀಯ ಭಾವೈಕ್ಯತೆ, ಸಹಬಾಳ್ವೆ ಮತ್ತು ಸೌಹಾರ್ಧತೆ ನಮ್ಮೆಲ್ಲರ ಉಸಿರಾಗಬೇಕು. ಯುವಜನ ತಮ್ಮ ಹೊಣೆಯನ್ನರಿತು ದುಶ್ಚಟಗಳಿಗೆ ಬಲಿಯಾಗದೆ ಮಾನವ ಸಂಪನ್ಮೂಲವಾಗಿ ರೂಪುಗೊಳ್ಳಬೇಕೆಂದರು.

ಗಣರಾಜ್ಯೋತ್ಸವದ ಅಮೃತ ಮಹೋತ್ಸವದಲ್ಲಿದ್ದು ಸಂವಿಧಾನದ ಆಶಯಗಳ ಬಗ್ಗೆ ಜನಸಾಮಾನ್ಯರಿಗೂ ತಿಳಿಸುವ ಉದ್ದೇಶದಿಂದ ಮುಂಬರುವ ಫೆಬ್ರವರಿ 23ರ ವರೆಗೆ ಜಿಲ್ಲೆಯ ಎಲ್ಲಾ 194 ಗ್ರಾಮ ಪಂಚಾಯಿತಿಗಳ ಕೇಂದ್ರ ಮತ್ತು 7 ಸ್ಥಳೀಯ ಸಂಸ್ಥೆಗಳ ಕೇಂದ್ರಗಳಿಗೆ ತಲುಪಿ ಸಂವಿಧಾನ ಅರಿವು ಜಾಥಾ, ಮತ್ತು ಸ್ತಬ್ದಚಿತ್ರ ಅಭಿಯಾನ ನಡೆಯಲಿದೆ ಎಂದರು.

ಚುನಾವಣಾ ಪೂರ್ವದಲ್ಲಿ ನೀಡಿದ ಭರವಸೆಯಂತೆ ಶಕ್ತಿ ಯೋಜನೆಯಡಿ ಸಾರಿಗೆ ನಿಗಮಗಳ ಬಸ್‍ನಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ ಅವಕಾಶ ಕಲ್ಪಿಸಿದ್ದು ದಾವಣಗೆರೆ ವಿಭಾಗದಲ್ಲಿ 2.26 ಕೋಟಿ ಮಹಿಳೆಯವರು ಸಂಚರಿಸಿದ ವೆಚ್ಚವಾಗಿ 61.67 ಕೋಟಿ ಮೊತ್ತವನ್ನು ಸರ್ಕಾರ ನಿಗಮಕ್ಕೆ ನೀಡಿದೆ. ಅನ್ನಭಾಗ್ಯ ಯೋಜನೆಯಡಿ 5 ಕೆ.ಜಿ.ಅಕ್ಕಿ ಜೊತೆಗೆ ಅಕ್ಕಿ ಬದಲಾಗಿ ಪ್ರತಿ ಸದಸ್ಯರಿಗೆ 170 ರೂ.ಗಳನ್ನು ನಗದಾಗಿ ನೀಡುತ್ತಿದ್ದು ಜಿಲ್ಲೆಯಲ್ಲಿ 3.34 ಲಕ್ಷ ಬಿ.ಪಿ.ಎಲ್.ಕಾರ್ಡ್‍ದಾರರು ಇದರ ಲಾಭ ಪಡೆದಿದ್ದಾರೆ.

ಗೃಹಜ್ಯೋತಿ ಯೋಜನೆಯಡಿ ಗರಿಷ್ಠ 200 ಯುನಿಟ್ ಉಚಿತ ವಿದ್ಯುತ್ ನೀಡುತ್ತಿದ್ದು ಜಿಲ್ಲೆಯ 4,81,870 ಗ್ರಾಹಕರಲ್ಲಿ 4,24,057 ಗ್ರಾಹಕರು ಈ ಯೋಜನೆ ವ್ಯಾಪಿಗೆ ಸೇರಿದ್ದಾರೆ. ಗೃಹಲಕ್ಷ್ಮಿ ಯೋಜನೆಯಡಿ 3,38,867 ಮಹಿಳೆಯರಿಗೆ ಮಾಸಿಕ 2 ಸಾವಿರ ಪಾವತಿಸಿದ್ದು ಇದಕ್ಕಾಗಿ ರೂ. 279 ಕೋಟಿ ಅವರ ಖಾತೆಗೆ ಜಮಾ ಮಾಡಲಾಗಿದೆ. ಯುವನಿಧಿ ಯೋಜನೆಯಡಿ ಪದವಿ, ಡಿಪ್ಲೊಮಾ ಪಡೆದ ನಿರುದ್ಯೋಗಿ ಯುವಜನರಿಗೆ 3 ಸಾವಿರ ಮತ್ತು 1500 ರೂ.ಗಳ ನಿರುದ್ಯೋಗ ಭತ್ಯೆ ನೀಡುವ ಯೋಜನೆಗೆ ಚಾಲನೆ ನೀಡಿದ್ದು ಜಿಲ್ಲೆಯಲ್ಲಿ ಇಲ್ಲಿಯವರೆಗೆ 3616 ಯುವಜನರು ನೊಂದಣಿ ಮಾಡಿಸಿದ್ದಾರೆ. ಅರ್ಹತೆ ಹೊಂದಿರುವ ನಿರುದ್ಯೋಗಿ ಪದವೀಧರರು, ಡಿಪ್ಲೊಮಾ ಉತ್ತೀರ್ಣರಾದವರು ಇದರ ಪ್ರಯೋಜನ ಪಡೆಯಬಹುದಾಗಿದೆ ಎಂದರು.

ಈ ವರ್ಷ ಮಳೆಯ ತೀವ್ರ ಕೊರತೆಯಿಂದ ಎಲ್ಲಾ ತಾಲ್ಲೂಕುಗಳನ್ನು ಬರಪೀಡಿತ ಎಂದು ಘೋಷಣೆ ಮಾಡಲಾಗಿದೆ. ಆದರೂ ಸಹ ಜಿಲ್ಲೆಯಲ್ಲಿ 44 ವಾರಗಳಿಗಾಗುವಷ್ಟು ಮೇವಿನ ಸಂಗ್ರಹವಿದೆ. ರೈತರಿಗೆ ಬೆಳೆಹಾನಿ ಇನ್‍ಫುಟ್ ಸಬ್ಸೀಡಿ ನೀಡಲು ಬೆಳೆ ಸಮೀಕ್ಷೆ ನಡೆಸಿ 4,13,888 ತಾಕುಗಳನ್ನು ಫ್ರೂಟ್ಸ್ ತಂತ್ರಾಂಶದಲ್ಲಿ ಅಳವಡಿಸುವ ಮೂಲಕ 74188 ರೈತರಿಗೆ ಮೊದಲ ಕಂತಾಗಿ ರಾಜ್ಯ ಸರ್ಕಾರ ಪ್ರತಿ ರೈತರಿಗೆ ರೂ.2000 ಬೆಳೆ ಪರಿಹಾರ ಪಾವತಿಸಿದ್ದು ಇದಕ್ಕಾಗಿ ಜಿಲ್ಲೆಗೆ 14.21 ಕೋಟಿ ಬಿಡುಗಡೆಯಾಗಿದೆ. ಮತ್ತು ಜನರಿಗೆ ಉದ್ಯೋಗ ನೀಡಲು ಖಾತರಿಯಡಿ ಇಲ್ಲಿಯವರೆಗೆ 27.35 ಲಕ್ಷ ಮಾನವ ದಿನಗಳನ್ನು ಸೃಜಿಸಿ ಒಟ್ಟು 114.16 ಕೋಟಿ ವೆಚ್ಚ ಪಾವತಿಸಲಾಗಿದ್ದು 581 ಕೋಟಿಯಲ್ಲಿ ಕುಡಿಯುವ ನೀರಿನ ಕಾಮಗಾರಿಗಳು ಜಿಲ್ಲೆಯಲ್ಲಿ ನಡೆಯುತ್ತಿವೆ ಎಂದರು.

ತೋಟಗಾರಿಕೆ ಬೆಳೆ, ಸಂಸ್ಕರಣಾ ಘಟಕ, ಶೀತಲಗೃಹ, ನೆರಳು ಪರದೆ ನಿರ್ಮಾಣಕ್ಕಾಗಿ 2326 ಫಲಾನುಭವಿಗಳಿಗೆ 6.25 ಕೋಟಿ ಸಹಾಯಧನ ನೀಡಲಾಗಿದೆ. ಹನಿ ನೀರಾವರಿ ಯೋಜನೆಯಡಿ ಜಿಲ್ಲೆಯ 1165 ರೈತರಿಗೆ 7.36 ಕೋಟಿ ಸಹಾಯಧನ ನೀಡಲಾಗಿದೆ ಎಂದರು.
ದಾವಣಗೆರೆ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ 24*7 ನೀರು ಪೂರೈಕೆಗೆ ಜಲಸಿರಿ ಕಾಮಗಾರಿ ನಡೆಯುತ್ತಿದ್ದು ಕೆಲವು ಬಡಾವಣೆಗಳಿಗೆ ಈಗಾಗಲೇ ನೀರು ಪೂರೈಕೆ ಮಾಡಲಾಗುತ್ತಿದೆ. ಬರುವ ಮಾರ್ಚ್ ಅಂತ್ಯದ ವೇಳೆಗೆ ಪಾಲಿಕೆಯ ಎಲ್ಲಾ ವಲಯಗಳಿಗೂ ಜಲಸಿರಿ ನೀರು ಪೂರೈಕೆಯಾಗಲಿದೆ ಎಂದರು.

ಆಕರ್ಷಕ ಪಥ ಸಂಚಲನ: ಒಟ್ಟು 27 ತಂಡಗಳು ಶಿಸ್ತಿನ ಮತ್ತು ಆಕರ್ಷಕ ಪಥ ಸಂಚಲನದಲ್ಲಿ ಪಾಲ್ಗೊಂಡಿದ್ದವು, ಪೊಲೀಸ್ ಅಧಿಕಾರಿ ಸೋಮಶೇಖರ್ ಅವರು ಪಥಸಂಚಲನದ ನೇತೃತ್ವ ವಹಿಸಿದ್ದರು. ಷಣ್ಮುಖ ವಿ ಅಣ್ಣೀಗೆರೆ ಆರ್.ಎಸ್.ಐ. ನೇತೃತ್ವದ ಡಿಎಆರ್ ತಂಡ, ನಾಗರಿಕ ಪೊಲೀಸ್ ತಂಡ ಸಾಗರ್ ಅತ್ತರ್ವಾಲಾ, ಗೃಹರಕ್ಷಕ ದಳದಿಂದ ಅಂಬರೀಶ, ಅರಣ್ಯ ರಕ್ಷಕ ದಳ ಅಂಜಿನಪ್ಪ, ಅಗ್ನಿಶಾಮಕ ದಳ ಟಿ.ಆರ್. ಪರುಶುರಾಮಪ್ಪ, ಗೃಹರಕ್ಷಕ ದಳದಿಂದ ಟಿ. ಪುಷ್ಪಾವತಿ, ಡಿ.ಆರ್.ಎಂ. ವಿಜ್ಞಾನ ಕಾಲೇಜು ದರ್ಶನ್ ಎಂ.ಎಂ., ಡಿಆರ್‍ಆರ್ ಪಾಲಿಟೆಕ್ನಿಕ್ ಕಾಲೇಜ್‍ನಿಂದ ಭರತ್ ಕೆ.ಎಂ., ಎ.ಆರ್.ಜಿ ಕಾಲೇಜ್‍ನಿಂದ ಯುವರಾಜ್ ಡಿ.ಟಿ., ಸರ್ಕಾರಿ ಪ್ರಥಮ ದರ್ಜೆ ಕಾಲೇಜ್‍ನಿಂದ ಶಿವಕುಮಾರ್ ಎಸ್.ಹೆಚ್., ಜಿ.ಎಂ.ಐ.ಟಿ. ಕಾಲೇಜ್‍ನಿಂದ ಶಶಾಂಕ, ಎವಿಕೆ ಮಹಿಳಾ ಕಾಲೇಜ್‍ನಿಂದ ಸೃಷ್ಠಿ ಎಂ, ಸೆಂಟ್ ಪಾಲ್ಸ್ ಸ್ಕೂಲ್ ಪ್ರತೀಕ್ಷಾ, ಭಾರತ್ ಸೇವಾದಳ ಜಿಲ್ಲಾ ತಂಡ ಬಿಂದು ಎಂ. ಸಿದ್ದೇಶ್ವರ, ಸ್ಕೌಟ್ಸ್ & ಗೈಟ್ಸ್ ತಂಡ ಸಿದ್ದೇಶ, ರಾಷ್ಟ್ರೋತ್ಥಾನ ಸ್ಕೂಲ್ ಸುಜಯ್, ಪೊಲೀಸ್ ಪಬ್ಲಿಕ್ ಸ್ಕೂಲ್ ಸುಜಯ್, ಜೈನ್ ಪಬ್ಲಿಕ್ ಸ್ಕೂಲ್ ಪೃಥ್ವಿ , ಎಸ್.ಪಿ.ಎಸ್.ಎಂ.ಆರ್. ಸ್ಕೂಲ್‍ನಿಂದ ನಿರಂತರ, ಸೀತಮ್ಮ ಪಿ.ಯು ಕಾಲೇಜ್‍ನಿಂದ ರಿಹಾನ್ ಜಿಯಾ, ಸಿದ್ಧಗಂಗಾ ಸ್ಕೂಲ್ ಸ್ಪೆಷಲ್ ಟ್ರೂಪ್‍ನಿಂದ ರೋಶಿಣಿ, ಸರ್ಟಿಫೈಡ್ ಸ್ಕೂಲ್‍ನಿಂದ ಪುನೀತ್, ಮೌನೇಶ್ವರಿ ಕಿವುಡ ಮತ್ತು ಮೂಗರ ಶಾಲೆಯಿಂದ ಮಹೇಶ್, ಬಿ.ಹೆಚ್.ಪಿ.ಎಸ್. ಶಾಲೆಯಿಂದ ಸಾನಿಕ, ಶಾಮನೂರು ಶಿವಶಂಕರಪ್ಪ ಪಬ್ಲಿಕ್ ಸ್ಕೂಲ್ ತೋಳಹುಣಸೆಯಿಂದ ಯಶ್, ಶಾಮನೂರು ಶಿವಶಂಕರಪ್ಪ ಪಬ್ಲಿಕ್ ಸ್ಕೂಲ್ ತೋಳಹುಣಸೆ ಶಾಲಾ ಬ್ಯಾಂಡ್ ತಂಡದಿಂದ ಮಿಥುನ್, ಡಿಎಆರ್‍ನ ಬ್ಯಾಂಡ್ ಮಾಸ್ಟರ್ ಹೊನ್ನೂರಪ್ಪ ವಾದ್ಯ ತಂಡದಿಂದ ರಾಷ್ಟ್ರಗೀತೆ ಸಹಿತ, ಶುಶ್ರಾವ್ಯ ವಾದ್ಯ ಪ್ರಸ್ತುತಪಡಿಸಿದರು.

ಶಿಸ್ತಿನ ಪಥಸಂಚಲನ – ಪ್ರಶಸ್ತಿ : ಭಾರತ ಸೇವಾ ದಳ ತಂಡಕ್ಕೆ ಪ್ರಥಮ, ಸಿದ್ದೇಶ್ವರ ಶಾಲೆಯ ತಂಡಕ್ಕೆ ದ್ವಿತೀಯ ಮತ್ತು ಭಾರತ ಸೇವಾದಳ ತಂಡಕ್ಕೆ ತೃತೀಯ ಬಹುಮಾನ ದೊರಕಿತು. ಬೆಸ್ಟ್ ಎನ್‍ಸಿಸಿ ವಿಭಾಗದಲ್ಲಿ ಶಾಮನೂರು ಶಿವಶಂಕರಪ್ಪ ಶಾಲೆ ತೋಳಹುಣಸೆ ಪ್ರಥಮ, ಪೊಲೀಸ್ ಪಬ್ಲಿಕ್ ಶಾಲೆ ದ್ವಿತೀಯ, ಮೌನೇಶ್ವರ ಕಿವುಡ ಮತ್ತು ಮೂಕರ ಶಾಲೆ ತೃತೀಯ ಬಹುಮಾನ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಥಮ, ಜಿಎಂಐಟಿ ದ್ವಿತೀಯ, ಸೇಂಟ್ ಪಾಲ್ಸ್‍ಶಾಲೆಗೆ ತೃತೀಯ, ಬಹುಮಾನ ದೊರಕಿತು. ಬೆಸ್ಟ್ ಡ್ರೆಸ್ ವಿಭಾಗದಲ್ಲಿ ಜೈನ್ ಪಬ್ಲಿಕ್ ಶಾಲೆಗೆ ಪ್ರಥಮ, ರಾಷ್ಟ್ರೋತ್ಥಾನ ವಿದ್ಯಾಕೇಂದ್ರ ಶಾಲೆಗೆ ದ್ವಿತೀಯ, ಶಾಮನೂರು ಶಿವಶಂಕರಪ್ಪ ಶಾಲೆ ತೋಳಹುಣಸೆ ತೃತೀಯ ಸ್ಥಾನ ಲಭಿಸಿತು.

ಕಣ್ಮನ ಸೆಳೆದ ಸಾಂಸ್ಕøತಿಕ ಕಾರ್ಯಕ್ರಮಗಳು: ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಎಜು ಏಷಿಯಾ ನವೋದಯ ಪ್ರೌಢಶಾಲೆ, ಅಮೃತ ವಿದ್ಯಾಲಯಂ, ಪೋದಾರ್ ಇಂಟರ್ ನ್ಯಾಷನಲ್ ಶಾಲೆ, ಪಿ.ಎಸ್.ಎಸ್.ಇ.ಎಂ.ಆರ್ ತೋಳಹುಣಸೆ ಶಾಲೆಯ ಮಕ್ಕಳ ತಂಡಗಳು ದೇಶಪ್ರೇಮ, ತ್ಯಾಗ, ಬಲಿದಾನದ ಸಾರವನ್ನು ಹೊಂದಿದಂತಹ ನೃತ್ಯರೂಪಕಗಳನ್ನು ಪ್ರದರ್ಶಿಸಿದ್ದು ನೋಡುಗರ ಕಣ್ಮನ ಸೆಳೆಯುವಂತಿತ್ತು.

ಅತ್ಯುತ್ತಮ ಆಸ್ಪತ್ರೆಯ ವೈದ್ಯಾಧಿಕಾರಿಗಳಿಗೆ ಸನ್ಮಾನ: ದಾವಣಗೆರೆಯ ಎಸ್.ಎಸ್.ನಾರಾಯಣ ಹಾರ್ಟ್ ಸೆಂಟರ್‍ ಗೆ ಮೊದಲನೇ ಸ್ಥಾನ, ಸುಕ್ಷೇಮ ಆಸ್ಪತ್ರೆ ಎರಡನೇ ಸ್ಥಾನ, ಕೆರೆಬಿಳಚಿಯ ಸರ್ಕಾರಿ ಆಸ್ಪತ್ರೆಗೆ ಮೂರನೇ ಸ್ಥಾನ, ಹರಿಹರದ ದಾಮೋದರ ಮಂಜುನಾಥ ಸ್ಮಾರಕ ಆಸ್ಪತ್ರೆಗೆ ನಾಲ್ಕನೇ ಸ್ಥಾನ, ಹೊನ್ನಾಳಿಯ ಬಿ.ಎಸ್ ಕ್ಯಾಸನಕೆರೆಯ ಆಸ್ಪತ್ರೆಗೆ ಐದನೇ ಸ್ಥಾನವನ್ನು ನೀಡಲಾಯಿತು.
ಸಿದ್ದಗಂಗಾ ಶಾಲೆಯ ಮಕ್ಕಳು ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಸಂವಿಧಾನದ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಕುರಿತು ಬರೆದ ಚಿತ್ರವನ್ನು ವೀಕ್ಷಿಸಿದರು.

ಜಿಲ್ಲಾಧಿಕಾರಿ ಡಾ.ವೆಂಕಟೇಶ್.ಎಂ.ವಿ, ಪೂರ್ವ ವಲಯ ಪೊಲೀಸ್ ಮಹಾನಿರ್ದೇಶಕ ಡಾ; ಕೆ.ತ್ಯಾಗರಾಜ್, ಜಿ.ಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸುರೇಶ್.ಬಿ.ಇಟ್ನಾಳ್, ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್, ಅಪರ ಜಿಲ್ಲಾಧಿಕಾರಿ ಪಿ.ಎನ್ ಲೋಕೇಶ್ ಹಾಗೂ ಮಹಾನಗರಪಾಲಿಕೆ ಸದಸ್ಯರು ಉಪಸ್ಥಿತರಿದ್ದರು.

ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಡಿಜಿಟಲ್ ಮಾಧ್ಯಮ ಅತೀ ವೇಗವಾಗಿ ಜನರನ್ನು ತಲುಪುವ ನ್ಯೂ ಮೀಡಿಯಾ. ಡಿವಿಜಿಸುದ್ದಿ‌.ಕಾಂ ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. 10 ವರ್ಷದ ಅನುಭವದೊಂದಿಗೆ ಹೊಸತನಕ್ಕೆ ಕೈ ಹಾಕಿದ್ದೇವೆ. ಉಪಯುಕ್ತ ಮಾಹಿತಿ, ಸಲಹೆ, ಸೂಚನೆ ನೀಡುವವರು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com

Click to comment

Leave a Reply

Your email address will not be published. Required fields are marked *

More in ದಾವಣಗೆರೆ

To Top