ದಾವಣಗೆರೆ: ಜಿಲ್ಲೆಯಲ್ಲಿ ಮೇ 04 ರಂದು 6.86 ಮಿ.ಮೀ ಸರಾಸರಿ ಮಳೆಯಾಗಿದ್ದು, ಒಟ್ಟಾರೆ ಅಂದಾಜು ರೂ.12.45 ಲಕ್ಷ ನಷ್ಟ ಸಂಭವಿಸಿದೆ. ಚನ್ನಗಿರಿ 0.72 ಮಿ.ಮೀ, ದಾವಣಗೆರೆ ತಾಲ್ಲೂಕಿನಲ್ಲಿ 6.46 ಮಿ.ಮೀ, ಹರಿಹರ 8.60 ಮಿ.ಮೀ, ಹೊನ್ನಾಳಿ 11.5 ಮಿ.ಮೀ, ಹಾಗೂ ಜಗಳೂರು 7.06 ಮಿ.ಮೀ ಮಳೆಯಾಗಿದೆ. ಜಿಲ್ಲೆಯಲ್ಲಿ ಸರಾಸರಿ 6.86 ಮಿ.ಮೀ ವಾಸ್ತವ ಮಳೆಯಾಗಿದೆ.
ದಾವಣಗೆರೆ ತಾಲ್ಲೂಕಿನ ಮಾಯಕೊಂಡ ಹೋಬಳಿ ಹುಚ್ಚವ್ವನಹಳ್ಳಿ ಗ್ರಾಮದಲ್ಲಿ ಇಬ್ಬರು ಸಿಡಿಲು ಬಡಿದು ಮೃತ ಪಟ್ಟಿರುತ್ತಾರೆ. ಹೊನ್ನಾಳಿ ತಾಲ್ಲೂಕು ವ್ಯಾಪ್ತಿಯಲ್ಲಿ 1 ಕಚ್ಚಾ ಮನೆ ಭಾಗಶಃ ಹಾನಿಯಾಗಿದ್ದು ಅಂದಾಜು ರೂ.1.00 ಲಕ್ಷ ನಷ್ಟ ಸಂಭವಿಸಿರುತ್ತದೆ. ಒಂದು ಎಕರೆ ಎಲೆಬಳ್ಳಿ ಬೆಳೆ ಹಾನಿಯಾಗಿದ್ದು, ಅಂದಾಜು ಮೊತ್ತ ರೂ.50 ಸಾವಿರ ನಷ್ಟ ಸಂಭವಿಸಿದ್ದು ತಾಲ್ಲೂಕಿನಲ್ಲಿ ಒಟ್ಟು ರೂ.1.50 ಲಕ್ಷ ನಷ್ಟ ಸಂಭವಿಸಿರುತ್ತದೆ.
ಮೇದನಹಳ್ಳಿ ಗ್ರಾಮದಲ್ಲಿ ಒಬ್ಬ ವ್ಯಕ್ತಿ ಸಿಡಿಲು ಬಡಿದು ಮೃತಪಟ್ಟಿರುತ್ತಾರೆ. ಇವರು ತುಮಕೂರು ಜಿಲ್ಲೆ ಶಿರಾ ತಾಲ್ಲೂಕು ಗಿಡ್ಡಪ್ಪಳ ಹಟ್ಟಿ ಗ್ರಾಮದವರಾಗಿರುತ್ತಾರೆ. ಚನ್ನಗಿರಿ ತಾಲ್ಲೂಕಿನಲ್ಲಿ 5 ಎಕರೆ ಬಾಳೆ ಬೆಳೆ ಹಾನಿಯಾಗಿದ್ದು, ಅಂದಾಜು ರೂ.95 ಸಾವಿರ ನಷ್ಟ ಸಂಭವಿಸಿರುತ್ತದೆ. ಜಿಲ್ಲೆಯಲ್ಲಿ ಒಟ್ಟಾರೆ ರೂ.12.45 ಲಕ್ಷ ಅಂದಾಜು ನಷ್ಟ ಸಂಭವಿಸಿದ್ದು ಸರ್ಕಾರದ ಮಾರ್ಗಸೂಚಿಯನ್ವಯ ಸಂತ್ರಸ್ತರಿಗೆ ಪರಿಹಾರ ವಿತರಿಸಲು ಕ್ರಮ ವಹಿಸಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.



