ದಾವಣಗೆರೆ: ಜಿಲ್ಲೆಯ ಬಹುತೇಕ ಕಡೆ ಎರಡ್ಮೂರು ದಿನದಿಂದ ಎಡೆಬಿಡದೆ ಮಳೆ ಸುರಿಯುತ್ತಿದೆ. ಈ ಮಳೆ ಇನ್ನೂ ಮೂರ್ನಾಲ್ಕು ದಿನ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಜಿಲ್ಲೆಯಲ್ಲಿ ಮುಂಗಾರು ಪೂರ್ವ ಮಳೆಯ ಆರ್ಭಟಕ್ಕೆ ಜನಜೀವನದ ಅಸ್ತವ್ಯಸ್ತವಾಗಿದೆ.
ಚಳಿ ವಾತಾವರಣ
ಜಿಲ್ಲೆಯಲ್ಲಿ ಹವಾಮಾನ ಇಲಾಖೆ ಯಲ್ಲೋ ಅಲರ್ಟ್ ಘೋಷಿಸಿದೆ. ಮೇ 24ರವರೆಗೂ ಜಿಲ್ಲಾದ್ಯಂತ ಶೀತ ಗಾಳಿ, ಗುಡುಗು ಸಹಿತ ಜೋರು ಮಳೆಯಾಗುವ ಸಾಧ್ಯತೆ ಇವೆ. ಜಿಲ್ಲೆಯಲ್ಲಿ ಸತತ ಮಳೆಯಿಂದಾಗಿ ಬೇಸಿಗೆ ಬಿಸಿಲು ಮಾಯವಾಗಿ ಚಳಿ ವಾತಾವರಣ ನಿರ್ಮಾಣವಾಗಿದೆ.
ಚಾಪೆ ಹಾಸಿದ ಭತ್ತ
ಎಡೆಬಿಡದೆ ಸುರಿಯುತ್ತಿರುವ ಮಳೆಗೆ ಭತ್ತ ಚಾಪೆ ಹಾಸಿದ್ದು, ಭತ್ತ ಕಟಾವಿಗೆ ವರುಣ ಅಡ್ಡಿಯಾಗಿದ್ದಾರೆ. ಜಿಲ್ಲೆಯ ದಾವಣಗೆರೆ, ಹರಿಹರ, ಚನ್ನಗಿರಿ, ಹೊನ್ನಾಳಿ, ನ್ಯಾಮತಿ ತಾಲ್ಲೂಕಿನ ಭತ್ತ ಬೆಳೆಯಲಾಗುತ್ತಿದ್ದು, ಭತ್ತ ಕಟಾವಿಗೆ ಬಂದಿದ್ದು, ಜೋರು ಮಳೆಗೆ ಭತ್ತ ಚಾಪೆ ಹಾಸಿದೆ. ಇದರಿಂದರ ರೈತರು ಸಂಕಷ್ಟಕ್ಕೆ ಒಳಗಾಗಿದ್ದಾರೆ.ಒಂದೆಡೆ ಭತ್ತದ ದರ ಕುಸಿತದಿದ್ದ ಆತಂಕದಲ್ಲಿದ್ದ ರೈತರು ಈಗ ಮಳೆಯಿಂದ ಭತ್ತವನ್ನು ಕೊಯ್ಲು ಮಾಡಲು ಆಗದಂತಹ ಪರಿಸ್ಥಿತಿ ಉಂಟಾಗಿದೆ.
ಕೆಲವು ರೈತರು ಕಟಾವು ಮಾಡಿದ್ದ ಭತ್ತವನ್ನು ಒಣಗಿಸಲು ಸಹ ಮಳೆ ಬಿಡುತ್ತಿಲ್ಲ. ಮಳೆ ಸುರಿಯುತ್ತಿರುವುದರಿಂದ ಭತ್ತದ ಹುಲ್ಲು ಜಮೀನುಗಳಲ್ಲಿಯೇ ಕೊಳೆಯಲಾರಂಭಿಸಿದ್ದು, ದನಗಳಿಗೆ ಮೇವು ಇಲ್ಲದಂತಹ ಸ್ಥಿತಿ ನಿರ್ಮಾಣವಾಗಿದೆ.