ದಾವಣಗೆರೆ: ಬಿರು ಬಿಸಿಲಿನಿಂದ ಸುಡುತ್ತಿದ್ದ ಧರೆಗೆ ಇಂದು (ಏ.12) ಸಂಜೆ ಬಿದ್ದ ಮಳೆ ತಂಪೆರೆದಿದೆ. ದಾವಣಗೆರೆ ನಗರಕ್ಕೆ ಇದು ವರ್ಷದ ಮೊದಲ ಮಳೆಯಾಗಿದ್ದು, ಬಿಸಿಲಿನ ತಾಪಮಾನದಿಂದ ಕಂಗೆಟ್ಟಿದ್ದ ಬೆಣ್ಣೆನಗರಿ ಜನಕ್ಕೆ ಸಂಜೆಯ ಮಳೆ ತುಸು ನಿಟ್ಟುಸಿರು ಬಿಡುವಂತೆ ಮಾಡಿದೆ.
ಸಂಜೆ 4 ಗಂಟೆಯಿಂದಲೇ ದಟ್ಟ ಮೋಡ ಆವರಿಸಿತ್ತು. ದಾವಣಗೆರೆ-ಹರಿಹರ ಅವಳಿ ನಗರ ಸೇರಿ ಸುತ್ತಮುತ್ತಲಿನ ಗ್ರಾಮದಲ್ಲಿ ಮಳೆಯಾಗಿದೆ. ಬಿಸಿಲಿನ ತಾಪಮಾನದಿಂದ ಬಸವಳಿದು ಹೋಗಿದ್ದ ಜಿಲ್ಲೆಯ ಜನರು ಮಳೆ ಆಗಮನವನ್ನೇ ಎದುರು ನೋಡುತ್ತಿದ್ದರು. ಬಿಸಿಲಿನ ತಾಪ, ಬಿಸಿ ಗಾಳಿಯಿಂದ ಸುಡುತ್ತಿದ್ದ ದಾವಣಗೆರೆಗೆ ವರ್ಷದ ಮೊದಲ ಮಳೆಯಿಂದ ವಾತಾವರಣ ತುಸು ತಂಪಾಗಿದೆ.
ಇಂದಿನಿಂದ ರಾಜ್ಯದ ಹಲವೆಡೆ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಏಪ್ರಿಲ್ 12 ರಿಂದ ಏ 14 ರವರೆಗೆ ಮತ್ತು 17 ಮತ್ತು 18 ರಂದು ರಾಜ್ಯದಲ್ಲಿ ಗುಡುಗು ಸಹಿತ ಮಳೆಯಾಗಲಿದೆ ಎಂದು ಮುನ್ಸೂಚನೆ ನೀಡಿದೆ. ಏ.12,15,16 ರಂದು ಕರಾವಳಿ ಮತ್ತು ಮಲೆನಾಡು ಜಿಲ್ಲೆಗಳಲ್ಲಿ ಭಾಗಗಳಲ್ಲಿ ಜೋರು ಮಳೆಯಾಗಲಿದೆ.
ಬೀದರ್, ಕಲಬುರ್ಗಿ, ವಿಜಯಪುರ, ಕೊಪ್ಪಳ, ರಾಯಚೂರು, ವಿಜಯಪುರ, ಗದಗ, ಬಳ್ಳಾರಿ, ಚಿತ್ರದುರ್ಗ, ದಾವಣಗೆರೆ, ಹಾವೇರಿ , ಕೊಡಗು, ಚಿಕ್ಕಮಗಳೂರು. ಮೈಸೂರು. ಮಂಡ್ಯ ಮತ್ತು ಹಾಸನ ಜಿಲ್ಲೆಗಳಲ್ಲಿ ಮಳೆಯಾಗುವ ಸಾಧ್ಯತೆಯಿದೆ.



