ದಾವಣಗೆರೆ: ಜಿಲ್ಲೆಯಲ್ಲಿ 15 ದಿನ ಬಿಡುವಿನ ನಂತರ ಮತ್ತೆ ಭಾರೀ ಮಳೆಯಾಗಿದೆ. ಜಿಲ್ಲೆಯ ಕೆಲ ಕಡೆ ಸಂಜೆಯಿಂದಲೇ ಶುರುವಾಗಿದ್ದ ಮಳೆ ರಾತ್ರಿ 10.30ರವರೆಗೂ ಜೋರು ಮಳೆಯಾಗಿದೆ. ಸಂಜೆ ದಟ್ಟ ಮೋಡಗಳು ಆವರಿಸಿದ್ದು, ತುಂತುರು ಮಳೆಯಾಗುತ್ತಿತ್ತು. ರಾತ್ರಿ 9.30ಕ್ಕೆ ಜೋರಾದ ಮಳೆ, ಒಂದು ಗಂಟೆ ಹೊತ್ತು ಸುರಿದಿದೆ. ಈ ಮೂಲಕ ಕಾದ ಭೂಮಿಗೆ ವರುಣ ತಂಪೆರೆದಿದೆ. ದಾವಣಗೆರೆ ನಗರ, ತಾಲೂಕು, ಹರಿಹರದ ವಿವಿಧೆಡೆ ಮಳೆಯಾಗಿದೆ.
ದಾವಣಗೆರೆ ಜಿಲ್ಲೆ ಸೇರಿ ವಿವಿಧ ಕಡೆ ಎರಡು ದಿನ ಭಾರೀ ಮಳೆ ಮುನ್ಸೂಚನೆ ಇದೆ. ದಾವಣಗೆರೆ ಜಿಲ್ಲೆಯಲ್ಲಿ ಭತ್ತದ ಕಟಾವು ಬರದಿಂದ ಸಾಗುತ್ತಿದ್ದು, ಅಕಾಲಿಕ ಮಳೆಯಿಂದ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗುತ್ತಿದೆ. ಹೀಗಾಗಿ ರೈತರು ಮುನ್ನೆಚ್ಚರಿಕೆ ವಹಿಸಿ ಭತ್ತ ಕಟಾವು ಮಾಡಬೇಕಿದೆ. ರಾತ್ರಿ ಏಕಾಏಕಿ ಮಳೆ ಶುರುವಾಗಿದ್ದರಿಂದ್ದ ಈಗಾಗಲೇ ಕೊಯ್ಲು ಮಾಡಿದ ರೈತರು ರಾಶಿ ಮುಚ್ಚಲು ಪರದಾಡಿದರು. ಇನ್ನೂ ಕೊಯ್ಲು ಆಗದ ಭತ್ತದ ಬೆಳೆ ಗಾಳಿ ಹೊಡೆತಕ್ಕೆ ನೆಲಕ್ಕೆ ಬಿದ್ದಿದ್ದು, ಅಕಾಲಿಕ ಮಳೆಯಿಂದ ಭತ್ತ ಬೆಳೆಗಾರರಿಗೆ ಸಂಕಷ್ಠ ಎದುರಾಗಿದೆ.
ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿದ್ದು, ಎರಡು ದಿನಗಳ ಕಾಲ ರಾಜ್ಯದ ದಕ್ಷಿಣ ಒಳನಾಡಿನಲ್ಲಿ ಸಾಧಾರಣ ಮಳೆಯಾಗಲಿದೆ. ಹವಾಮಾನ ಮುನ್ಸೂಚನೆ ಪ್ರಕಾರ ಭಾಗಶಃ ಮೋಡ ಕವಿದ ವಾತಾವರಣ ಇರಲಿದ್ದು, ಆಗಾಗ್ಗೆ ಬಲವಾದ ಮೇಲ್ಮೈ ಗಾಳಿ ಬೀಸಲಿದೆ.
ಕರಾವಳಿ ಹಾಗೂ ಮಲೆನಾಡಲ್ಲಿ ಚದುರಿದಂತೆ ವ್ಯಾಪಕವಾಗಿ ಹಗುರದಿಂದ ಮಧ್ಯಮ ಮಳೆಯಾಗುವ ಸಾಧ್ಯತೆಯಿದೆ.ದಕ್ಷಿಣ ಒಳನಾಡಿನ ಮಂಡ್ಯ, ದಾವಣಗೆರೆ, ಚಿತ್ರದುರ್ಗ ಜಿಲ್ಲೆಗಳಲ್ಲಿ ಗುಡುಗು ಸಹಿತ ಭಾರೀ ಮಳೆಯಾಗುವ ಸಾಧ್ಯತೆ ಇದೆ. ಉಳಿದಂತೆ ಮೈಸೂರು ಮತ್ತು ತುಮಕೂರಲ್ಲಿ ಚದುರಿದಂತೆ ಹಗುರದಿಂದ ಸಾಧಾರಣ ಮಳೆಯಾಗಲಿದೆ.
ಉತ್ತರ ಒಳನಾಡಿನ ಕಲಬುರಗಿ ಜಿಲ್ಲೆಯಾದ್ಯಂತ ಭಾರೀ ಮಳೆಯಾಗುವ ನಿರೀಕ್ಷೆ ಇದೆ. ಉಳಿದಂತೆ ಹಗುರದಿಂದ ಕೂಡಿದ ಮಳೆಯಾಗಲಿದೆ. ಮಲೆನಾಡಿನ ಕೊಡಗು, ಹಾಸನ, ಚಿಕ್ಕಮಗಳೂರು, ಶಿವಮೊಗ್ಗದಲ್ಲಿ ಗುಡುಗು ಸಹಿತ ಸಾಧಾರಣ ಮಳೆಯಾಗಲಿದೆ. ಇತ್ತ ಕರಾವಳಿಯ ದಕ್ಷಿಣ ಕನ್ನಡದಲ್ಲಿ ಚದುರಿದಂತೆ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಹಗುರವಾದ ಮಳೆಯಾಗಲಿದೆ.



