ದಾವಣಗೆರೆ: ಜಿಲ್ಲೆಯಲ್ಲಿ ಕಳೆದ ಒಂದು ತಿಂಗಳಿಂದ ಮಳೆ ಕೈಕೊಟ್ಟಿದ್ದು, ಬಿತ್ತನೆ ಮಾಡುದ ರೈತರು ಕಂಗಾಲಾಗಿದ್ದಾರೆ. ಮಳೆ ಕಣ್ಣು ತೆರೆಯದ ಹಿನ್ನೆಲೆ ರೈತರು ದೇವರ ಮೊರೆ ಹೋಗಿದ್ದಾರೆ. ಮಳೆ ಕೈಕೊಟ್ಟಾಗ ಮಳೆ ಮಲ್ಲಪ್ಪ, ಕಪ್ಪೆ ಮದುವೆ, ಕತ್ತೆ ಮೆರವಣಿಗೆ ಮಾಡಿದರೆ ಮಳೆ ಬರುತ್ತೆ ಎಂಬುದು ಜನರ ನಂಬಿಕೆ. ಹೀಗಾಗಿ ಜಿಲ್ಲೆಯಲ್ಲಿ ಚನ್ನಗಿರಿ ತಾಲ್ಲೂಕಿನ ದಾಗೀನಕಟ್ಟೆ ಗ್ರಾಮದಲ್ಲಿ ಮಳೆರಾಯನ ಕೃಪೆಗಾಗಿ ಗ್ರಾಮಸ್ಥರು ಇಡೀ ಗ್ರಾಮದಲ್ಲಿ ಕತ್ತೆ ಮೆರವಣಿಗೆ ಮಾಡಿದ್ದಾರೆ.
ಮೊದಲಿಗೆ ಕತ್ತೆಗೆ ಪೂಜೆ ಸಲ್ಲಿಸಿದ ಗ್ರಾಮಸ್ಥರು, ಗ್ರಾಮದ ಬೀದಿಗಳಲ್ಲಿ ತಮಟೆ ಬಾರಿಸುತ್ತಾ ಮೆರವಣಿಗೆ ಮಾಡಿದರು. ಈ ಮೂಲಕ ಮಳೆರಾಯನನ್ನು ಆಹ್ವಾನಿಸಿದರು. ದಾಟಗೀನಕಟ್ಟೆಗ್ರಾಮದ ಸುತ್ತಮುತ್ತಲಿನ ಜಮೀನುಗಳಲ್ಲಿ ರೈತರು ಕಷ್ಟಪಟ್ಟು ಬೆಳೆದ ಮೆಕ್ಕೆಜೊಳ ಬೆಳೆಗಳು ಒಣಗಲಾರಂಭಿಸಿವೆ.
ಮಳೆ ಕೈಕೊಟ್ಟಿದ್ದು ಫಸಲು ಕೈತಪ್ಪುವ ಆತಂಕ ರೈತರದ್ದು. ಅಡಿಕೆ, ಬಾಳೆ, ತೆಂಗಿನ ತೋಟಗಳೂ ನೀರಿಲ್ಲಧೇ ಒಣಗಲಾರಂಭಿಸಿವೆ. ಇದರಿಂದಾಗಿ ರೈತರು ತಲೆಮೇಲೆ ಕೈಯಿಟ್ಟು ಕೂರುವ ಪರಿಸ್ಥಿತಿ ತಲೆದೋರಿದೆ.
ತೆಂಗು, ಅಡಿಕೆ ಬೆಳೆಯನ್ನು ಹೆಚ್ಚಾಗಿ ಬೆಳೆಯಲಾಗುತ್ತದೆ. 20 ದಿನಗಳಿಂದ ಮಳೆಯಾಗದಿದ್ದರಿಂದ ಬೆಳೆಗಳು ಒಣಗುತ್ತಿವೆ. ಕತ್ತೆ ಮೆರವಣಿಗೆ ಮಾಡಿದರೆ ಮಳೆ ಬರುತ್ತದೆ ಎಂಬ ನಂಬಿಕೆ ಇದೆ. ಹೀಗಾಗಿ ಗ್ರಾಮದಲ್ಲಿ ಮೆರವಣಿಗೆ ಮಾಡಿದ್ದೇವ ಎಂದು ರೈತ ಮುಖಂಡ ಸಂತೋಷ್ ಹೇಳಿದ್ದಾರೆ.



