ದಾವಣಗೆರೆ: ನಗರದಲ್ಲಿ ಒಂದು ಗಂಟೆಗೂ ಹೆಚ್ಚು ಹೊತ್ತು ಜೋರು ಮಳೆಯಾಗಿದ್ದು ಬೈಕ್ ಸವಾರರು, ಶಾಲಾ ಮಕ್ಕಳು, ಸಂಜೆ ಆಫೀಸ್ ಮುಗಿಸಿ ಮನೆ ಸೇರಬೇಕಿದ್ದ ಮಂದಿ ಪರದಾಟ ನಡೆಸಿದರು.
ಶಾಲೆಗಳು ಬಿಡುವ ವೇಳೆಗೆ ಸರಿಯಾಗಿ ಮಳೆ ಶುರುವಾಗಿದ್ದರಿಂದ ಮಕ್ಕಳು ಮನೆ ಸೇರಲು ಪರದಾಡಬೇಕಾಯಿತು. ಕೊಂಡಜ್ಜಿ ರಸ್ತೆ, ಆರ್ ಟಿಓ ಆಫೀಸ್ , ದೇವರಾಜ ಅರಸು ಬಡಾವಣೆ, ಹೊಂಡದ ಸರ್ಕಲ್, ಕಾಯಿಪೇಟೆ, ಗಡಿಯಾರ ಕಂಬ, ಪಿಬಿ ರಸ್ತೆ, ಮಾರುಕಟ್ಟೆ, ಬೇತೂರು ರಸ್ತೆ, ಹದಡಿ ರಸ್ತೆ, ಹೊಸ ದಾವಣಗೆರೆಯಲ್ಲಿಯೂ ಮಳೆಯಾಗಿದೆ. ಇನ್ನೂ ಯರಗುಂಟೆ, ಆವರಗೊಳ್ಳ, ಕಕ್ಕರಗೊಳ್ಳ, ಕಡ್ಲೆಬಾಳು, ಕೊಂಡಜ್ಜಿ, ಬುಳ್ಳಾಪುರ, ಕೆಂಚನಹಳ್ಳಿ ಸೇರಿದಂತೆ ಗ್ರಾಮೀಣ ಭಾಗದಲ್ಲಿಯೂ ಜೋರು ಮಳೆಯಾಗಿದೆ.
ಜಿಲ್ಲೆಯಲ್ಲಿ ಕಳೆದ ಒಂದು ವಾರದಿಂದ ಉತ್ತಮ ಮಳೆಯಾಗುತ್ತಿದೆ. ಜಿಲ್ಲೆಯ ಕೆಲವು ಕಡೆ ಬಿತ್ತನೆ ಪೂರ್ಣಗೊಂಡಿದ್ದು, ಇನ್ನೂ ಕೆಲವು ಪ್ರದೇಶದಲ್ಲಿ ಬಿತ್ತನೆ ಬಾಕಿ ಇದೆ. ಈಗಾಗಲೇ ಬಿತ್ತಿದ ಪೈರುಗಳಿಗೆ ಸತತ ಮಳೆಯಿಂದ ಶೀತದ ವಾತಾವರಣ ನಿರ್ಮಾಣವಾಗಿದೆ. ರಾಜ್ಯದ ಕರಾವಳಿ, ಮಲೆನಾಡು, ಒಳನಾಡು ಭಾಗದದಲ್ಲಿ ಇನ್ನೂ ಮೂರ್ನಾಲ್ಕು ದಿನ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.



