ದಾವಣಗೆರೆ: ಜಿಲ್ಲೆಯಲ್ಲಿ ಕಳೆದ ಒಂದು ವಾರದಿಂದ ಸತತ ಮಳೆಯಾಗುತ್ತಿದ್ದು, ಜನ ಜೀವನ ಅಸ್ತವ್ಯಸ್ತವಾಗಿದೆ. ವರುಣನ ಅಬ್ಬರಕ್ಕೆ ಕೆರೆ- ಕಟ್ಟೆಗಳು ಉಕ್ಕಿ ಹರಿಯುತ್ತಿವೆ. ಇದರಿಂದ ಜಿಲ್ಲೆಯ ಪ್ರಮುಖ ಬೆಳೆಗಳಾದ ಮೆಕ್ಕೆಜೋಳ, ಅಡಿಕೆ, ಬಾಳೆ, ಕಬ್ಬು, ಭತ್ತದ ಬೆಳೆಗಳಿಗೆ ಅಪಾರ ಪ್ರಮಾಣದ ಹಾನಿ ಉಂಟಾಗಿದೆ.
ದಾವಣಗೆರೆ ತಾಲ್ಲೂಕಿನ ಅಣಜಿ ಹಾಗೂ ರಾಜನ ಕೆರೆ ಕೋಡಿ ಬಿದ್ದಿದ್ದು, ಸಾವಿರಾರು ಎಕರೆ ಕೃಷಿ ಭೂಮಿಗೆ ನೀರು ನುಗ್ಗಿದೆ. ಇದರಿಂದ ಕೊಯ್ಲಿಗೆ ಬಂದ ಮೆಕ್ಕೆಜೋಳ ಬೆಳೆ ಜಲಾವೃತವಾಗಿದ್ದು, ರೈತರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಇನ್ನೂ ತಾಲ್ಲೂಕಿನ ನಲ್ಕುಂದ ಗ್ರಾಮದ ಬಳಿ ಭದ್ರಾ ನೀರಿನ ಕಾಲುವೆ ಒಡೆದು ಅಪಾರ ಪ್ರಮಾಣ ನೀರು ರೈತರ ಜಮೀನಿಗೆ ನುಗ್ಗುತ್ತಿದೆ.
ಮಳೆ ನೀರಿನಿಂದ ಹದಡಿ, ಶ್ಯಾಗಲೆ, ಸೂಳೆಕೆರೆ ಹಳ್ಳ ಉಕ್ಕಿ ಹರಿಯುತ್ತಿರುವ ಕಾರಣ ದೇವರ ಬೆಳಕೆರೆ ಜಲಾಶಯದ ಹಿಂಭಾಗದಲ್ಲಿ ಸಂಗ್ರಹವಾಗಿದ್ದ ಜಲಸಸ್ಯ ನೀರು ಹೋಗುವ ಗೇಟ್ ಗೆ ಅಡ್ಡಲಾಗಿ ಬಂದಿದೆ. ಈ ಹಿಂದೆ ರೈತರ ಒತ್ತಡದಿಂದ ಕರ್ನಾಟಕ ನೀರಾವರಿ ನಿಗಮದ ಎಂಜಿನಿಯರ್‌ಗಳು ಜಲಸಸ್ಯ ತೆರವು ಕಾರ್ಯ ನಡೆಸಿದ್ದರು. ಇದೀಗ ಮತ್ತೆ ಜಲಸಸ್ಯ ಹರಿದು ಬಂದು ಗೇಟ್ ನಲ್ಲಿ ನೀರು ಹರಿದು ಹೋಗಲು ಅನುವು ಮಾಡಿಕೊಡುತ್ತಿಲ್ಲ. ಈ ಕಾರಣ ಜಲಾಶಯದಿಂದ ಹಿನ್ನೀರಿನಲ್ಲಿ ಅಡಿಕೆ ತೋಟ, ಕೊಯ್ಲಿಗೆ ಬಂದ ಮೆಕ್ಕೆಜೋಳ, ಭತ್ತದ ಜಮೀನುಗಳು ಮುಳುಗಡೆಯಾಗಿವೆ.
ದೇವರ ಬೆಳಕೆರೆ ಡ್ಯಾಂ ಹಿನ್ನೀರಿನಿಂದ ಗುಳದಹಳ್ಳಿ, ಸಂಕ್ಲೀಪುರ, ಬಲ್ಲೂರು, ದೇವರಬೆಳೆಕರೆ, ಮಿಟ್ಲಕಟ್ಟೆಯ ನೂರಾರು ಎಕರೆ ಭತ್ತದಗದ್ದೆ, ಅಡಿಕೆ ತೋಟ ಮುಳುಡೆಯಾಗಿದೆ. ಕೊಮಾರನಹಳ್ಳಿ ಕೆರೆ ಕೋಡಿ ಬಿದ್ದು, ತಗ್ಗು ಪ್ರದೇಶದಲ್ಲಿರುವ ಭತ್ತದ ಗದ್ದೆಗಳಲ್ಲಿ ನೀರು ನುಗ್ಗಿದೆ.



