ದಾವಣಗೆರೆ: ಮಲೆನಾಡು ಭಾಗದಲ್ಲಿ ನಿರಂತರ ಮಳೆಯಾಗುತ್ತಿದ್ದು, ತುಂಗ-ಭದ್ರಾ ಡ್ಯಾಂ ಭರ್ತಿಯಾಗಿವೆ. ಎರಡು ಡ್ಯಾಂ ನಿಂದಲೂ ಅಪಾರ ಪ್ರಮಾಣದ ನೀರು ಹೊರ ಬಿಟ್ಟಿದ್ದು, ತುಂಗಭದ್ರಾ ನದಿ ಮೈತುಂಬಿ ಹರಿಯುತ್ತಿದೆ. ನದಿಗೆ ಹೊಂದಿಕೊಂಡಿರುವ ದಾವಣಗೆರೆ ಜಿಲ್ಲೆಯ ಹೊನ್ನಾಳಿ ಹಾಗೂ ಹರಿಹರ ತಾಲೂಕಿನ ಗ್ರಾಮಗಳು ಹಾಗೂ ಜಮೀನು ಪ್ರದೇಶಗಳು ಮುಳುಗಡೆ ಭೀತಿ ಎದುರಾಗಿದೆ.
ನದಿ ಉಕ್ಕಿ ಹರಿಯುತ್ತಿರುವುದರಿಂದ ಉಕ್ಕಡಗಾತ್ರಿ (Ukkadagathri) ಪುಣ್ಯಕ್ಷೇತ್ರ ಜಲಾವೃತಗೊಂಡಿದೆ. ಕ್ಷೇತ್ರದ ಸ್ನಾನಘಟ್ಟ ಪ್ರದೇಶಕ್ಕೆ ನೀರು ನುಗ್ಗಿದೆ. ಅಲ್ಲಿನ ಸುತ್ತಮುತ್ತಲಿನ ಅಂಗಡಿಗಳು ನೀರಲ್ಲಿ ಮುಳುಗಿವೆ.
ಇನ್ನು ಜಿಲ್ಲೆಯಲ್ಲಿ ಜುಲೈ 15 ರಂದು ಬಿದ್ದ ಮಳೆಯ ವಿವರದನ್ವಯ 7.00 ಮಿ.ಮೀ. ಸರಾಸರಿ ಮಳೆಯಾಗಿದ್ದು, ರೂ.11.60 ಲಕ್ಷ ರೂ. ಅಂದಾಜು ನಷ್ಟ ಸಂಭವಿಸಿದೆ. ತಾಲ್ಲೂಕುವಾರು ಮಳೆ ಹಾಗೂ ಹಾನಿ ವಿವರ ಈ ಕೆಳಕಂಡಂತಿದೆ.ಚನ್ನಗಿರಿ 10.5 ಮಿ.ಮೀ, ದಾವಣಗೆರೆ ಮಳೆ 7.0 ಮಿ.ಮೀ, ಹರಿಹರ ಮಳೆ 5.0 ಮಿ.ಮೀ, ಹೊನ್ನಾಳಿ 11.9 ಮಿ.ಮೀ, ಜಗಳೂರು 2.5 ಮಿ.ಮೀ, ನ್ಯಾಮತಿ ಮಳೆ 10.0 ಮಿ.ಮೀ ಮಳೆಯಾಗಿದೆ.
ದಾವಣಗೆರೆ ತಾಲ್ಲೂಕು ವ್ಯಾಪ್ತಿಯಲ್ಲಿ 1 ಕಚ್ಚಾಮನೆ ಭಾಗಶಃ ಹಾನಿಯಾಗಿದ್ದು, ರೂ.0.30ಲಕ್ಷ ಅಂದಾಜು ನಷ್ಟ ಸಂಭವಿಸಿರುತ್ತದೆ. ಹರಿಹರ ತಾಲ್ಲೂಕು ವ್ಯಾಪ್ತಿಯಲ್ಲಿ 3 ಪಕ್ಕಾ ಮನೆ ಭಾಗಶ: ಹಾನಿಯಾಗಿದ್ದು, ರೂ. 1.20 ಲಕ್ಷ, 2 ಕಚ್ಚಾ ಮನೆ ತೀವ್ರ ಹಾನಿಯಾಗಿದ್ದು, ರೂ.2.00 ಲಕ್ಷ, ಮತ್ತು 1 ಕಚ್ಚಾ ಮನೆ ಭಾಗಶಃ ಹಾನಿಯಾಗಿದ್ದು, ರೂ.0.30 ಲಕ್ಷ ಒಟ್ಟು ರೂ.3.50ಲಕ್ಷ ಅಂದಾಜು ನಷ್ಟ ಸಂಭವಿಸಿರುತ್ತದೆ.
ನ್ಯಾಮತಿ ತಾಲ್ಲೂಕು ವ್ಯಾಪ್ತಿಯಲ್ಲಿ 2 ಕಚ್ಚಾ ಮನೆ ಭಾಗಶ: ಹಾನಿಯಾಗಿದ್ದು, ರೂ.1.00 ಲಕ್ಷ ಮತ್ತು 1 ಕಚ್ಚಮನೆ ಭಾಗಶಃ ಹಾನಿಯಾಗಿದ್ದು ರೂ.0.30 ಲಕ್ಷ ಮತ್ತು 2 ದನದ ಕೊಟ್ಟಿಗೆ ಹಾನಿಯಾಗಿದ್ದು, ರೂ.0.50ಲಕ್ಷ ಒಟ್ಟು ರೂ.1.80ಲಕ್ಷ ಅಂದಾಜು ನಷ್ಟ ಸಂಭವಿಸಿರುತ್ತದೆ. ಚನ್ನಗಿರಿ ತಾಲ್ಲೂಕು ವ್ಯಾಪ್ತಿಯಲ್ಲಿ 1 ಪಕ್ಕಾ ಮನೆ ತೀವ್ರ ಹಾನಿಯಾಗಿದ್ದು ರೂ.2.50 ಲಕ್ಷ, 2 ಪಕ್ಕಾ ಮನೆ ಭಾಗಶ: ಹಾನಿಯಾಗಿದ್ದು, ರೂ. 1.00 ಲಕ್ಷ, 4 ಕಚ್ಚಾಮನೆ ಭಾಗಶಃ ಹಾನಿಯಾಗಿದ್ದು, ರೂ.2.50ಲಕ್ಷ, ಒಟ್ಟು ರೂ.6.00ಲಕ್ಷ ಅಂದಾಜು ನಷ್ಟ ಸಂಭವಿಸಿರುತ್ತದೆ. ಸರ್ಕಾರದ ಮಾರ್ಗಸೂಚಿ ಅನ್ವಯ ಸಂತ್ರಸ್ತರಿಗೆ ಪರಿಹಾರ ವಿತರಿಸಲು ಕ್ರಮ ವಹಿಸಲಾಗುವುದೆಂದು ಜಿಲ್ಲಾಧಿಕಾರಿ ಶಿವಾನಂದ ಕಪಾಶಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಎರಡು ತಾಲೂಕುಗಳ ಪೈಕಿ 65ಕ್ಕೂ ಹೆಚ್ಚು ಗ್ರಾಮಗಳಿಗೆ ತೊಂದರೆಯಾಗಲಿದ್ದು, ಸಾವಿರಾರು ಹೆಕ್ಟೇರ್ ಜಮೀನು ಪ್ರದೇಶಗಳು ಮುಳುಗಡೆಯಾಗಲಿವೆ. ಉಕ್ಕಿ ಹರಿಯುತ್ತಿದೆ. ಇದರಿಂದ ಮತ್ತಷ್ಟು ಪ್ರವಾಹ ಹೆಚ್ಚಾಗುವ ಸಾಧ್ಯತೆ ಇದೆ. ಜಿಲ್ಲಾಡಳಿತ ಹಾಗೂ ಹೊನ್ನಾಳಿ, ಹರಿಹರ ತಾಲೂಕು ಆಡಳಿತ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಂಡಿದ್ದು, ಯಾರು ಕೂಡ ನದಿ ಪಾತ್ರಕ್ಕೆ ಹೋಗದಂತೆ ಎಚ್ಚರಿಕೆ ನೀಡಿದೆ.



