ದಾವಣಗೆರೆ: ಜಿಲ್ಲೆಯಲ್ಲಿ ಕಳೆದ ಮೂರ್ನಾಲ್ಕು ದಿನಗಳಿಂದ ಮುಂಗಾರು ಪೂರ್ವ ಮಳೆ ಅಬ್ಬರ ಜೋರಾಗಿದ್ದು, ಇಂದು ಸಹ ದಾವಣಗೆರೆ ನಗರ ಸುತ್ತಮುತ್ತ ಮಳೆಯ ಅಬ್ಬರಿಸಿದೆ. ಸುಮಾರು ಅರ್ಧ ಗಂಟೆಗೂ ಹೆಚ್ಚು ಹೊತ್ತು ಜೋರು ಮಳೆಯಾಗಿದೆ.
ದಾವಣಗೆರೆಯ ಹದಡಿ ರಸ್ತೆ, ವಿದ್ಯಾನಗರ, ಆಂಜನೇಯ ಬಡಾವಣೆ, ದೇವರಾಜ ಅರಸು ಬಡಾವಣೆ, ಕೊಂಡಜ್ಜಿ ರಸ್ತೆ, ಬೇತೂರು ರಸ್ತೆ, ಪಿಬಿ ರಸ್ತೆ ಸೇರಿಂದ ನಗರದ ಸುತ್ತಮುತ್ತಲಿನ ಗ್ರಾಮಗಳಾದ ಆವರಗೊಳ್ಳ, ಕಕ್ಕರಗೊಳ್ಳ, ಕೊಂಡಜ್ಜಿ, ಕಡ್ಲೆಬಾಳು, ಬೇತೂರು, ಶಾಮನೂರು ಸೇರಿದಂತೆ ಅನೇಕ ಗ್ರಾಮದಲ್ಲಿ ಇಂದು ಉತ್ತಮ ಮಳೆಯಾಗಿದೆ.
ಜಿಲ್ಲೆಯಲ್ಲಿ ಏ.17 ರಂದು 11.35 ಮಿ.ಮೀ. ಸರಾಸರಿ ಮಳೆಯಾಗಿದೆ. ಒಟ್ಟಾರೆ 6.82 ಲಕ್ಷ ರೂ ಅಂದಾಜು ನಷ್ಟ ಸಂಭವಿಸಿದೆ. ಚನ್ನಗಿರಿ ತಾಲ್ಲೂಕಿನಲ್ಲಿ 8.56 ಮಿ.ಮೀ, ದಾವಣಗೆರೆ- 5.51, ಹರಿಹರ-5.45, ಹೊನ್ನಾಳಿ -32.2 ಹಾಗೂ ಜಗಳೂರು ತಾಲ್ಲೂಕಿನಲ್ಲಿ 5.04 ಮಿ.ಮೀ ವಾಸ್ತವ ಮಳೆಯಾಗಿದೆ.ದಾವಣಗೆರೆ ತಾಲ್ಲೂಕಿನ ವ್ಯಾಪ್ತಿಯಲ್ಲಿ ಎರಡು ಕಚ್ಚಾ ಮನೆ ಭಾಗಶ: ಹಾನಿಯಾಗಿದ್ದು, ಎರಡು ಎಕರೆ ಬಾಳೆ ಬೆಳೆಗೆ ಹಾನಿಯಾಗಿ ಒಟ್ಟು 5.60 ಲಕ್ಷ ಅಂದಾಜು ನಷ್ಟ ಸಂಭವಿಸಿದೆ. ಹೊನ್ನಾಳಿ ತಾಲ್ಲೂಕಿನಲ್ಲಿ ಒಂದು ದನದಕೊಟ್ಟಿಗೆ ಹಾನಿಯಾಗಿದ್ದು, 1.25 ಎಕರೆ ಬಾಳೆ ಮತ್ತು 0.20 ಗುಂಟೆ ಅಡಿಕೆ ಬೆಳೆಗೆ ಹಾನಿಯಾಗಿ ಒಟ್ಟು 1.22 ಲಕ್ಷ ಅಂದಾಜು ನಷ್ಟ ಸಂಭವಿಸಿದೆ.
ಜಿಲ್ಲೆಯಲ್ಲಿ ಒಟ್ಟು 6.82 ಲಕ್ಷ ರೂ. ನಷ್ಟದ ಅಂದಾಜು ಮಾಡಲಾಗಿದೆ. ಸರ್ಕಾರದ ಮಾರ್ಗಸೂಚಿ ಅನ್ವಯ ಸಂತ್ರಸ್ತರಿಗೆ ಪರಿಹಾರ ವಿತರಿಸಲು ಕ್ರಮ ವಹಿಸಲಾಗುವುದೆಂದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



