ದಾವಣಗೆರೆ : ಆ. 12 ರಿಂದ 25 ರವರೆಗೆ ದ್ವಿತೀಯ ಪಿಯುಸಿ ಪೂರಕ ಪರೀಕ್ಷೆಗಳನ್ನು ನಡೆಸಲು ದಿನಾಂಕ ನಿಗಧಿಪಡಿಸಲಾಗಿದ್ದು, ಜಿಲ್ಲೆಯಾದ್ಯಂತ ಒಟ್ಟು 08 ಕೇಂದ್ರಗಳಲ್ಲಿ ದ್ವಿತೀಯ ಪಿಯುಸಿ ಪೂರಕ ಪರೀಕ್ಷೆಗಳು ನಡೆಯಲಿದ್ದು, ದಾವಣಗೆರೆ ನಗರದಲ್ಲಿ 04, ಹರಿಹರ, ಜಗಳೂರು, ಚನ್ನಗಿರಿ ಮತ್ತು ಹೊನ್ನಾಳಿಗಳಲ್ಲಿ ತಲಾ 01 ಪರೀಕ್ಷೆ ಕೇಂದ್ರಗಳಲ್ಲಿ ಪೂರಕ ಪರೀಕ್ಷೆಗಳ ನಡೆಯಲಿವೆ.
ಒಟ್ಟಾರೆ 08 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆಗಳು ನಡೆಯುವುದರಿಂದ ಪರೀಕ್ಷಾ ಕೇಂದ್ರಗಳಲ್ಲಿ ಅವ್ಯವಹಾರಗಳು ನಡೆಯದಂತೆ ತಡೆಗಟ್ಟುವ ಸಲುವಾಗಿ ಪರೀಕ್ಷಾ ಕೇಂದ್ರ ಸುತ್ತಮುತ್ತ ಕನಿಷ್ಠ 200 ಮೀಟರ್ ವ್ಯಾಪ್ತಿಯೊಳಗೆ ನಿಷೇದಾಜ್ಞೆ ಜಾರಿಗೊಳಿಸಿ ಜಿಲ್ಲಾಧಿಕಾರಿ ಶಿವಾನಂದ ಕಾಪಶಿ ಆದೇಶ ಹೊರಡಿಸಿದ್ದಾರೆ.
ಪರೀಕ್ಷೆ ಸುಗಮವಾಗಿ ನಡೆಯಲು ಮತ್ತು ಪರೀಕ್ಷಾ ಕೇಂದ್ರಗಳಲ್ಲಿ ಅವ್ಯವಹಾರಗಳು ನಡೆಯದಂತೆ ತಡೆಗಟ್ಟುವ ಸಲುವಾಗಿ ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆಯುವ ದಿನಾಂಕಗಳಂದು ಪರೀಕ್ಷಾ ಕೇಂದ್ರಗಳ ಸುತ್ತಮುತ್ತ 200 ಮೀಟರ್ ಪ್ರದೇಶವನ್ನು ಸಾರ್ವಜನಿಕ ಪ್ರವೇಶಕ್ಕೆ ನಿಷೇಧಿತ ಪ್ರದೇಶವೆಂದು ಘೋಷಿಸಲಾಗಿದೆ. ಹಾಗೂ ಪರೀಕ್ಷಾ ಕೇಂದ್ರದ ಸಮೀಪವಿರುವ ಜೆರಾಕ್ಸ್ ಅಂಗಡಿ, ಕಂಪ್ಯೂಟರ್ ಅಂಗಡಿಗಳು ಮತ್ತು ಸೈಬರ್ ಕೆಫೆಗಳನ್ನು ತೆರೆಯದಂತೆ ಮುಚ್ಚಬೇಕೆಂದು ಆದೇಶಿಸಿದ್ದಾರೆ. ಈ ಆದೇಶವು ಪರೀಕ್ಷಾರ್ಥಿಗಳಿಗೆ ಹಾಗೂ ಪರೀಕ್ಷೆಯ ಕರ್ತವ್ಯ ನಿರ್ವಹಿಸಲು ನೇಮಕಾತಿ ಆದ ಅಧಿಕಾರಿಗಳು ಮತ್ತು ಸಿಬ್ಬಂದಿಗಳಿಗೆ ಅನ್ವಯಿಸುವುದಿಲ್ಲ ಎಂದು ತಿಳಿಸಿದ್ದಾರೆ.



