ದಾವಣಗೆರೆ: ಕುಕ್ಕುವಾಡ ಗ್ರಾಮದಲ್ಲಿರುವ ಶಾಸಕ ಶಾಮನೂರು ಶಿವಶಂಕರಪ್ಪರ ಪುತ್ರ ಎಸ್. ಎಸ್. ಗಣೇಶ ಮಾಲೀಕತ್ವದ ದಾವಣಗೆರೆ ಸಕ್ಕರೆ ಕಾರ್ಖಾನೆಯಿಂದ ಪ್ರತಿ ದಿನ ಹೊರ ಸೂಸುವ ಹೊಗೆಯಿಂದ ಸುತ್ತ ಮುತ್ತಲಿನ ಗ್ರಾಮಸ್ಥರು ಬೇಸತ್ತು ಹೋಗಿದ್ದು, ಜ.19 ರಂದು ಬೃಹತ್ ಪ್ರತಿಭಟನೆಗೆ ಸಜ್ಜಾಗಿದ್ದಾರೆ.
ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ರೈತ ಒಕ್ಕೂಟದ ಮುಖಂಡ ಬಿ.ಎಂ. ಸತೀಶ್, ಪ್ರತಿ ದಿನ ಸಕ್ಕರೆ ಕಾರ್ಖಾನೆಯ ಚಿಮಣಿಯಿಂದ ಬೂದಿ ಹೊರಬರುತ್ತಿದೆ. ಹಂಚಿನ ಮನೆಗಳ ಮೇಲೆ ಈ ಬೂದಿ ಬಿದ್ದು ಮನೆ ಒಳಗೆ ಹರಡುತ್ತಿದೆ. ಅನ್ನದ ತಟ್ಟೆಯಲ್ಲಿ ಬೂದಿ ಬೀಳುವುದರಿಂದ ಜನರು ರೋಗ ರುಜಿನಗಳಿಗೆ ತುತ್ತಾಗಿದ್ದಾರೆ. ಒಣ ಹಾಕಿದ ಬಟ್ಟೆಗಳ ಮೇಲೆ ಈ ಬೂದಿ ಬೀಳುವುದರಿಂದ ಬೂದು ಬಣ್ಣಕ್ಕೆ ತಿರುಗುತ್ತಿವೆ. ಹೀಗಾಗಿ ಜು.19ರಂದು ಕುಕ್ಕುವಾಡ ಗ್ರಾಮದಲ್ಲಿನ ಚನ್ನಗಿರಿ ಮುಖ್ಯ ರಸ್ತೆಯನ್ನು ತಡೆ ಪ್ರತಿಭಟಿಸಲಾಗುವುದ ಎಂದರು.
ಜಮೀನಿನ ಮೇವಿನ ಮೇಲೂ ಬೂದಿ ಬೀಳುವುದರಿಂದ ಈ ಹುಲ್ಲನ್ನೇ ಜಾನುವಾರುಗಳು, ಕುರಿ, ಮೇಕೆಗಳು ಮೇಯುವುದರಿಂದ ಜಾನುವಾರುಗಳು ಸಹ ಸರಿಯಾದ ಬೆಳವಣಿಗೆ ಇಲ್ಲದೆ ರೋಗಗ್ರಸ್ತವಾಗಿವೆ. ಒಂದು ದಿನವೂ ಬಿಳಿ ಅಥವಾ ಸ್ವಚ್ಛ ಬಟ್ಟೆ ಧರಿಸುವಂತಿಲ್ಲ. ಈ ಭಾಗದ ರೈತರು ಬೆಳೆದಿರುವ ಭತ್ತ ಕಪ್ಪಾಗುತ್ತಿದೆ. ಇದರಿಂದ ಮಾರುಕಟ್ಟೆಯಲ್ಲಿ ಭತ್ತದ ಬೆಲೆ ಕಡಿಮೆಯಾಗುತ್ತಿದೆ ಎಂದು ರೈತರ ಸ್ಥಿತಿಯ ಬಗ್ಗೆ ತಿಳಿಸಿದರು.
ಸಕ್ಕರೆ ಕಾರ್ಖಾನೆಯಿಂದ ವಿಷಯುಕ್ತ ತ್ಯಾಜ್ಯ ನೀರನ್ನು ಹಳ್ಳಕ್ಕೆ ಬಿಡಲಾಗುತ್ತಿದೆ. ಈ ನೀರಿನಲ್ಲಿ ಆಸಿಡ್ ಇದ್ದು, ಹಳ್ಳದಲ್ಲಿರುವ ಮೀನು ಮತ್ತು ಇತರೆ ಜಲಚರ ಜೀವಿಗಳು ಸತ್ತಿವೆ. ಸುತ್ತಮುತ್ತಲ ಗ್ರಾಮಗಳ ರೈತರು ಇದೇ ನೀರನ್ನು ಪಂಪ್ ಸೆಟ್‌ಗಳ ಮೂಲಕ ಜಮೀನುಗಳಿಗೆ ಪೂರೈಕೆ ಮಾಡುತ್ತಿದ್ದಾರೆ. ಇದರಿಂದ ಎಲ್ಲಾ ರೈತರ ಜಮೀನು ವಿಷಯುಕ್ತವಾಗಿವೆ.ಮಣ್ಣಿನಲ್ಲಿರುವ ಜೀವಾಣುಗಳು ನಾಶವಾಗಿದ್ದು, ಯಾರ ಜಮೀನಿನಲ್ಲಿಯೂ ಎರೆ ಹುಳು ಕಾಣಿಸುವುದಿಲ್ಲ. ಬೂದಿ ಮಿಶ್ರಿತ ಗಾಳಿ ಮತ್ತು ವಿಷ ಮಿಶ್ರಿತ ನೀರಿನಿಂದ ಜನರ ಪಶುಗಳ ಉಸಿರಾಟ ಕಷ್ಟಕರವಾಗಿದೆ ಎಂದು ವಿವರಿಸಿದರು.
ಈ ಸಂದರ್ಭದಲ್ಲಿ ಎಂ.ಬಿ. ಹಾಲಪ್ಪ, ಬಲ್ಲೂರು ಬಸವರಾಜಪ್ಪ,ನಾಗರಾಜ್, ಕನಗೊಂಡನಹಳ್ಳಿ ವೈ.ಎನ್. ತಿಪ್ಪೇಸ್ವಾಮಿ, ಬಲ್ಲೂರು ಬಕ್ಕೇಶಯ್ಯ, ಎಂ.ಬಿ. ಗುತ್ಯಪ್ಪ, ಚನ್ನಪ್ಪ, ಅಂಜಲಿ ಜ್ಯೋತಿಕಾರ್, ಬಸವರಾಜಪ್ಪ ಮತ್ತಿತರರು ಇದ್ದರು.



