Connect with us

Dvgsuddi Kannada | online news portal | Kannada news online

ಸರ್ಕಾರಿ, ಅನುದಾನಿತ ಶಾಲೆಗಳಲ್ಲಿ ಖಾಲಿ ಇರುವ 25 ಸಾವಿರ ಶಿಕ್ಷಕರ ಹುದ್ದೆಗಳ ಭರ್ತಿಗೆ ಪ್ರಸ್ತಾವನೆ; ಸಚಿವ ಎಸ್.ಮಧು ಬಂಗಾರಪ್ಪ

ದಾವಣಗೆರೆ

ಸರ್ಕಾರಿ, ಅನುದಾನಿತ ಶಾಲೆಗಳಲ್ಲಿ ಖಾಲಿ ಇರುವ 25 ಸಾವಿರ ಶಿಕ್ಷಕರ ಹುದ್ದೆಗಳ ಭರ್ತಿಗೆ ಪ್ರಸ್ತಾವನೆ; ಸಚಿವ ಎಸ್.ಮಧು ಬಂಗಾರಪ್ಪ

ದಾವಣಗೆರೆ: ರಾಜ್ಯದಲ್ಲಿ 50 ಸಾವಿರ ಶಿಕ್ಷಕರ (Teacher) ಹುದ್ದೆಗಳ ಕೊರತೆ ಇದ್ದು 2025-26 ನೇ ಸಾಲಿನಲ್ಲಿ ಸರ್ಕಾರಿ, ಅನುದಾನಿತ ಹಾಗೂ ಕಲ್ಯಾಣ ಕರ್ನಾಟಕ ಭಾಗದಲ್ಲಿ 25 ಸಾವಿರ ಶಿಕ್ಷಕರ ಹುದ್ದೆಗಳನ್ನು ಭರ್ತಿ ಮಾಡಲು ಬಜೆಟ್‍ (budget) ನಲ್ಲಿ ಅನುಮೋದನೆ ನೀಡಲು ಪ್ರಸ್ತಾವನೆ ಸಿದ್ಧಪಡಿಸಲಾಗಿದೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್.ಮಧು ಬಂಗಾರಪ್ಪ ತಿಳಿಸಿದರು.

ಜಗಳೂರು ತಾಲ್ಲೂಕಿನ ಹುಚ್ಚಂಗಿಪುರ ಗ್ರಾಮದಲ್ಲಿ ವಿಧಾನ ಪರಿಷತ್ ಸದಸ್ಯರು, ರಾಜ್ಯಸಭಾ ಸದಸ್ಯರು ಹಾಗೂ ಸರ್ಕಾರದ ಅನುದಾನ ಸೇರಿ ರೂ.3.5 ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಲಾದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹೈಟೆಕ್ ಕಟ್ಟಡವನ್ನು ಲೋಕಾರ್ಪಣೆ ಮಾಡಿ ಸಮಾರಂಭದಲ್ಲಿ ಮಾತನಾಡಿದರು. ಶಿಕ್ಷಕರ ಕೊರತೆ ನೀಗಿಸಲು ಈಗಾಗಲೇ 13500 ಶಿಕ್ಷಕರ ನೇಮಕಾತಿಗೆ ಆದೇಶ ನೀಡಲಾಗಿದೆ. ಆದರೂ 50 ಸಾವಿರ ಶಿಕ್ಷಕರ ಹುದ್ದೆಗಳು ಖಾಲಿ ಇರುವುದರಿಂದ ಹಂತ ಹಂತವಾಗಿ ಖಾಲಿ ಹುದ್ದೆಗಳನ್ನು ಭರ್ತಿಗೆ ಕ್ರಮ ವಹಿಸಲಾಗುತ್ತದೆ ಎಂದರು.

ರಾಜ್ಯದಲ್ಲಿ ಸರ್ಕಾರಿ, ಅನುದಾನಿತ ಹಾಗೂ ಅನುದಾನ ರಹಿತ ಸೇರಿ 76 ಸಾವಿರದಷ್ಟು ಶಾಲೆಗಳಿದ್ದು 1.08 ಕೋಟಿ ವಿದ್ಯಾರ್ಥಿಗಳು 1 ರಿಂದ 12 ನೇ ತರಗತಿವರೆಗೆ ವ್ಯಾಸಂಗ ಮಾಡುತ್ತಿದ್ದು ಒಟ್ಟು ನೌಕರರಲ್ಲಿ ಶೇ 37 ರಷ್ಟು ಸಿಬ್ಬಂದಿ ಶಿಕ್ಷಣ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಸರ್ಕಾರಿ ಹಾಗೂ ಅನುದಾನಿತ ಶಾಲೆಯಲ್ಲಿ 57 ಲಕ್ಷ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಇಲ್ಲಿ ಅಗತ್ಯವಿರುವ ಮೂಲಭೂತ ಸೌಕರ್ಯಗಳ ಕೊರತೆಯೂ ಇದ್ದು ಹಂತ ಹಂತವಾಗಿ ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವ ಜೊತೆಗೆ ದಾನಿಗಳಿಂದ ಶಾಲೆಗಳಿಗೆ ಮೂಲಭೂತ ಸೌಕರ್ಯ ಕಲ್ಪಿಸಲು ನಮ್ಮ ಶಾಲೆ, ನಮ್ಮ ಜವಾಬ್ದಾರಿ ಪರಿಕಲ್ಪನೆಯನ್ನು ಜಾರಿಗೆ ತರಲಾಗಿದೆ ಎಂದರು.

ಪೌಷ್ಟಿಕತೆ ಹೆಚ್ಚಿಸಲು ಪ್ರತಿನಿತ್ಯ ಮೊಟ್ಟೆ; ಮಕ್ಕಳಲ್ಲಿನ ಅಪೌಷ್ಟಿಕತೆ ನಿವಾರಣೆಗಾಗಿ ಮಧ್ಯಾಹ್ನದ ಬಿಸಿಯೂಟದ ಜೊತೆಗೆ ಪ್ರತಿನಿತ್ಯ ಮೊಟ್ಟೆ ನೀಡಲಾಗುತ್ತಿದೆ. ಇದರಲ್ಲಿ ಆಜೀಂ ಪ್ರೇಂಜೀ ಪೌಂಢೇಷನ್‍ನಿಂದ ನಾಲ್ಕು ದಿನ, ಸರ್ಕಾರದಿಂದ 2 ದಿನ ಮೊಟ್ಟೆ ನೀಡಲಾಗುತ್ತಿದ್ದು ಸ್ಥಳೀಯವಾಗಿ ಬಾಳೆಹಣ್ಣು ಅಥವಾ ಶೇಂಗಾ ಚಿಕ್ಕಿ ನೀಡಲಾಗುತ್ತಿದೆ. ಎಲ್ಲ ದಿನವೂ ಮೊಟ್ಟೆ ನೀಡಿದರೆ ಉತ್ತಮ ಎಂದು ಅಭಿಪ್ರಾಯ ಪಟ್ಟ ಅವರು ಶಾಲೆಯಲ್ಲಿ ಮಕ್ಕಳ ಹಾಜರಾತಿ ಹೆಚ್ಚಿಸಲು ಮತ್ತು ಪೋಷಕರೊಂದಿಗೆ ಮಕ್ಕಳನ್ನು ಕರೆದುಕೊಂಡು ಹೋಗದೆ ಶಾಲೆಗೆ ಕಳುಹಿಸಬೇಕೆಂದು ಮಾಜಿ ಮುಖ್ಯಮಂತ್ರಿ ಬಂಗಾರಪ್ಪನವರು ಪ್ರತಿ ದಿನದ ಹಾಜರಾತಿಗೆ ರೂ.1 ರಂತೆ ಮಕ್ಕಳಿಗೆ ನೀಡಲಾಗುತ್ತಿತ್ತು, ನಂತರ ಮಧ್ಯಾಹ್ನ ಊಟ ನೀಡುತ್ತಾ ಬಂದು ಈಗ ಹಾಲು, ಮೊಟ್ಟೆಯನ್ನು ನೀಡಲಾಗುತ್ತಿದೆ. ಭವಿಷ್ಯದ ಪ್ರಜೆಗಳಾಗುವ ಮಕ್ಕಳು ಆರೋಗ್ಯವಂತರಾಗಿ ಉತ್ತಮ ಶಿಕ್ಷಣ ಪಡೆದು ದೇಶದ ಆಸ್ತಿಯಾಗಬೇಕು ಮತ್ತು ಸಂವಿಧಾನ ಉಳಿಯಲು ಎಲ್ಲರೂ ಶಿಕ್ಷಣವಂತರಾಗಬೇಕೆಂದರು.

ಗ್ರಂಥಾಲಯಗಳಿಗೆ ಮಹತ್ವ; ಶಾಲೆಗಳಿಗೆ ನೀಡುವ ಮಹತ್ವವನ್ನು ಗ್ರಂಥಾಲಯಗಳಿಗೆ ನೀಡುವ ಅವಶ್ಯಕತೆ ಇದೆ. ಜಗಳೂರು ಪಟ್ಟಣದಲ್ಲಿ ಮುಖ್ಯಗ್ರಂಥಾಲಯವನ್ನು ಬಹಳ ಸುಸಜ್ಜಿತವಾಗಿ ನಿರ್ಮಾಣ ಮಾಡಿ ನಡೆಸಲಾಗುತ್ತಿದೆ. ಗ್ರಂಥಾಲಯಗಳು ಶಿಕ್ಷಕ ರಹಿತವಾದ ವಿಶ್ವವಿದ್ಯಾನಿಲಯಗಳಿದ್ದಂತೆ, ಗ್ರಂಥಾಲಯಗಳಲ್ಲಿ ಅಧ್ಯಯನ ಮಾಡಿದ ಅನೇಕರು ಉನ್ನತ ಹುದ್ದೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಓದುಗರನ್ನು ಸಂದರ್ಶಿಸಿದಾಗ ಗ್ರಾಮ ಆಡಳಿತಾಧಿಕಾರಿ ಹುದ್ದೆಗೆ ಆಯ್ಕೆಯಾಗಿದ್ದು ಕೆಎಎಸ್ ಅಧಿಕಾರಿಯಾಗುವ ಆಸೆ ಇದ್ದು ಮುಂದಿನ ದಿನಗಳಲ್ಲಿ ಪರೀಕ್ಷೆ ತೆಗೆದುಕೊಳ್ಳಲು ಈಗಿನಿಂದಲೇ ತಯಾರಿ ನಡೆಸುತ್ತಿದ್ದೇನೆ ಎಂಬ ಅಭಿಪ್ರಾಯ ವ್ಯಕ್ತವಾಯಿತು. ಇದೇ ಮಾದರಿಯಲ್ಲಿ ರಾಜ್ಯಾದ್ಯಂತ ಗ್ರಂಥಾಲಯಗಳನ್ನು ಅಭಿವೃದ್ದಿ ಮಾಡುವ ಗುರು ಹೊಂದಲಾಗಿದೆ ಎಂದರು.

8 ನೇ ತರಗತಿವರೆಗೆ ವಿಸ್ತರಣೆ; ಹುಚ್ಚಂಗಿಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 1 ರಿಂದ 7 ನೇ ತರಗತಿವರೆಗೆ ಮಾತ್ರ ಇದ್ದು ಇದನ್ನು 8 ನೇ ತರಗತಿಯವರೆಗೆ 2025-26 ಶೈಕ್ಷಣಿಕ ವರ್ಷದಿಂದಲೇ ವಿಸ್ತರಣೆ ಮಾಡಲು ಆದೇಶಿಸಲಾಗಿದೆ. 9-10 ನೇ ತರಗತಿಯನ್ನು ಇಲ್ಲಿಯೇ ಮುಂದುವರೆಗೆಸಲು ಮಕ್ಕಳ ಸಂಖ್ಯೆಯನ್ನಾಧರಿಸಿ ಮುಂದಿನ ನಿರ್ಧಾರವನ್ನು ಇಲಾಖೆ ಕೈಗೊಳ್ಳಲಿದೆ, ಶಾಲೆಯ ಅಭಿವೃದ್ದಿಗೆ ರೂ.25 ಲಕ್ಷಗಳನ್ನು ಕೇಳಿದ್ದು ಅನುದಾನ ಬಿಡುಗಡೆ ಮಾಡಲಾಗುತ್ತದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡು ಮಾತನಾಡಿದ ಜಗಳೂರು ಶಾಸಕರಾದ ಚಿಕ್ಕಮ್ಮನಹಟ್ಟಿ ಬಿ.ದೇವೆಂದ್ರಪ್ಪ ಮಾತನಾಡಿ ವಿಧಾನ ಪರಿಷತ್ ಸದಸ್ಯರಾದ ಎನ್.ರವಿಕುಮಾರ್ ಅವರು ತಮ್ಮ ಅನುದಾನದಲ್ಲಿ ಹುಟ್ಟೂರಿನ ಶಾಲೆ ನಿರ್ಮಾಣಕ್ಕೆ ಶ್ರಮಿಸಿದ್ದಾರೆ, ಇದೇ ಮಾದರಿಯಲ್ಲಿ ಚಿಮ್ಮನಕಟ್ಟೆಯಲ್ಲಿಯು ಹೈಟೆಕ್ ಶಾಲೆ ನಿರ್ಮಾಣ ಮಾಡಲಾಗುತ್ತದೆ.

ಕ್ಷೇತ್ರದ ಎಲ್ಲಾ ಗ್ರಾಮಗಳಿಗೂ ನದಿ ನೀರನ್ನು ಕುಡಿಯುವ ಉದ್ದೇಶಕ್ಕೆ ಸರಬರಾಜು ಮಾಡಲು ಉದ್ದೇಶಿಸಿದ್ದು ಮುಂದಿನ ದಿನಗಳಲ್ಲಿ ಸಾಕಾರಗೊಳ್ಳಲಿದೆ. ಜಗಳೂರಿಗೆ ಬಾಲಕಿಯರ ಪದವಿ ಪೂರ್ವ ಕಾಲೇಜು ಬಹು ದಿನಗಳ ಬೇಡಿಕೆಯಾಗಿದ್ದು ಆರಂಭಿಸಲು ಶಿಕ್ಷಣ ಸಚಿವರಿಗೆ ಮನವಿ ಮಾಡಿದರು.

ವಿಧಾನಪರಿಷತ್ತಿನ ಸದಸ್ಯರಾದ ರವಿಕುಮಾರ್ ಎನ್ ಪ್ರಾಸ್ತಾವಿಕವಾಗಿ ಮಾತನಾಡಿ ಈ ಶಾಲೆಯಲ್ಲಿ ನಾನು ಓದಿದ್ದು ನಮ್ಮ ತಾಯಿಯ ಆಸೆಯಂತೆ ನಮ್ಮೂರಿಗೆ ಶಾಲಾ ಕಟ್ಟಡ ನಿರ್ಮಿಸಲು ಶ್ರಮಿಸಿದ್ದೇನೆ. ಈ ಹಿಂದೆ ನಾಲ್ಕನೇ ತರಗತಿವರೆಗೆ ಮಾತ್ರ ಇದ್ದು ಈಗ 7 ನೇ ತರಗತಿವರಗೆ ಇದೆ. ಇಲ್ಲಿನ ಜನರು ಶ್ರಮ ಜೀವಿಗಳಾಗಿದ್ದು ಕೆಲಸಕ್ಕಾಗಿ ವಲಸ ಹೋಗುತ್ತಾರೆ. ಆದ್ದರಿಂದ ಇಲ್ಲಿನ ಮಕ್ಕಳ ವಿದ್ಯಾಭ್ಯಾಸಕ್ಕೆ ಅನುಕೂಲವಾಗಲು ಸ್ಮಾರ್ಟ್ ಕ್ಲಾಸ್ ಸೇರಿದಂತೆ ಎಲ್ಲಾ ಮೂಲಭೂತ ಸೌಕರ್ಯವನ್ನು ಶಾಲೆಯಲ್ಲಿ ಕಲ್ಪಿಸಿದ್ದು ಇದಕ್ಕೆ ರಾಜ್ಯಸಭಾ ಸದಸ್ಯರ ಅನುದಾನ ಮತ್ತು ವಿಧಾನ ಪರಿಷತ್‍ರ ನಿಧಿಯಲ್ಲಿ 2.5 ಕೋಟಿ ನೀಡಲಾಗಿದೆ, ಒಟ್ಟು ರೂ.3.5 ಕೋಟಿ ವೆಚ್ಚದಲ್ಲಿ ಅತ್ಯಾಧುನಿಕ ಹಾಗೂ ಸುಸಜ್ಜಿತವಾದ ಶಾಲೆ ನಿರ್ಮಿಸಿದ್ದು ಕಂಪ್ಯೂಟರ್ ಸೇರಿದಂತೆ ಇತರೆ ಉದ್ದೇಶಗಳಿಗಾಗಿ ಇಲಾಖೆಯಿಂದ ರೂ.25 ಲಕ್ಷ ಅನುದಾನ ಬಿಡುಗಡೆ ಮಾಡಬೇಕೆಂದರು.
ಜಿಲ್ಲಾಧಿಕಾರಿ ಗಂಗಾಧರ ಸ್ವಾಮಿ ಜಿ ಎಂ ಮಾತನಾಡಿ ಗ್ರಾಮದಲ್ಲಿ ಸ್ವಚ್ಚತೆಯನ್ನು ಕಾಪಾಡಿಕೊಳ್ಳಬೇಕು, ಎಲ್ಲೆಂದರಲ್ಲಿ ಪ್ಲಾಸ್ಟಿಕ್ ಹಾಕಬಾರದು ಎಂದರು.

ವಿಧಾನ ಪರಿಷತ್ ಸದಸ್ಯರಾದ ಪ್ರೊ;ಎಸ್.ವಿ. ಸಂಕನೂರು, ಕೆ.ಎಸ್. ನವೀನ್, ಚಿದಾನಂದಗೌಡ, ಬ್ರಾಹ್ಮಣ ಅಭಿವೃದ್ದಿ ನಿಗಮದ ಅಧ್ಯಕ್ಷ ಅಸಗೋಡು ಜಯಸಿಂಹ, ಮಾಜಿ ರಾಜ್ಯಸಭಾ ಸದಸ್ಯ ಕೆ.ಸಿ.ರಾಮಮೂರ್ತಿ, ದಿದ್ದಿಗಿ ಗ್ರಾ.ಪಂ ಅಧ್ಯಕ್ಷರಾದ ಗುತ್ಯಮ್ಮ ಸಿದ್ದಪ್ಪ, ಎಸ್‍ಡಿಎಂಸಿ ಅಧ್ಯಕ್ಷ ಪಿ.ಟಿ.ರಮೇಶ, ದಾನಿಗಳಾದ ಸ್ಪೇಸ್ ಮ್ಯಾನೇಜ್‍ಮೆಂಟ್ ಸಲ್ಯೂಷನ್ ಲಿಮಿಟೆಡ್ ಡಾ.ದಿನೇಶ್, ವೋಲ್ಲೋ ಗ್ರೂಪ್ ಜಿ.ವಿ.ರಾವ್, ಜಿ.ಪಂ.ಉಪಕಾರ್ಯದರ್ಶಿ ಕೃಷ್ಣನಾಯ್ಕ್ ಹಾಗೂ ಗ್ರಾಮದ ಮುಖಂಡರು ಉಪಸ್ಥಿತರಿದ್ದರು.

ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com

Click to comment

Leave a Reply

Your email address will not be published. Required fields are marked *

More in ದಾವಣಗೆರೆ

To Top