ಬೆಂಗಳೂರು: ಮೂರು ಹಂತದಲ್ಲಿ ಸ್ಮಾರ್ಟ್ ಹಾಗೂ ಫ್ರೀಪೇಡ್ (ವಿದ್ಯುತ್ ಬಳಸುವುದಕ್ಕೂ ಮುನ್ನ ಹಣ ಪಾವತಿಸುವ ವಿಧಾನ ) ವಿದ್ಯುತ್ ಮೀಟರ್ ಅಳವಡಿಕೆ ಮಾಡಲು ರಾಜ್ಯ ಸರ್ಕಾರ ನಿರ್ಧರಿಸಿದ್ದು, ಮೀಟರ್ ದರವನ್ನು ಗ್ರಾಹಕರ ಬದಲು ಕಂಪನಿಗಳು ಭರಿಸಲಿವೆ. ಕೃಷಿ ಪಂಪ್ ಸೆಟ್ ಗಳಿಗೆ ಯಾವುದೇ ಅಳವಡಿಕೆ ಮಾಡುವುದಿಲ್ಲ ಎಂದು ಇಂಧನ ಸಚಿವ ಸುನೀಲ್ ಕುಮಾರ್ ಹೇಳಿದ್ದಾರೆ.
ವಿಧಾನ ಪರಿಷತ್ ನಲ್ಲಿ ಪ್ರಶ್ನೋತ್ತರ ವೇಳೆ ಕಾಂಗ್ರೆಸ್ ಸದಸ್ಯ ಪ್ರತಾಪ್ ಚಂದ್ರ ಶೆಟ್ಟಿ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಮೂರು ಹಂತದಲ್ಲಿ ಸ್ಮಾರ್ಟ್ ಮೀಟರ್ ಅಳವಡಿಕೆ ಮಾಡಲಾಗುತ್ತದೆ. ಮೊದಲು ಸರ್ಕಾರಿ ಕಚೇರಿಗಳಲ್ಲಿ ಅಳವಡಿಕೆ ಮಾಡುತ್ತೇವೆ. ಈಗಾಗಲೇ 5792 ಕೋಟಿ ವಿದ್ಯುತ್ ಬಿಲ್ ಸರ್ಕಾರಿ ಕಚೇರಿಗಳಿಂದ ಬಾಕಿ ಬರಬೇಕಿದೆ. ಹಾಗಾಗಿ ಅಲ್ಲಿ ಮೊದಲು ಅಳವಡಿಕೆ ಮಾಡಲಾಗುತ್ತದೆ ಎಂದರು.
ಎರಡನೇ ಹಂತದಲ್ಲಿ ಹೊಸ ಕಟ್ಟಡ ನಿರ್ಮಾಣ ವೇಳೆ ಪಡೆಯುವ ತಾತ್ಕಾಲಿಕ ಸಂರ್ಪಕಕ್ಕೆ ಸ್ಮಾರ್ಟ್ ಮೀಟರ್(ಪ್ರೀಪೇಡ್) ಅಳವಡಿಸಲಾಗುತ್ತದೆ. ಮೂರನೆಯದಾಗಿ 27 ಅಮೃತ ಸಿಟುಗಳಿಗೆ ಅಳವಡಿಸಲಾಗುತ್ತದೆ ಎಂದರು.ಶೇ. 15 ಕ್ಕೂ ಹೆಚ್ಚು ವಿದ್ಯುತ್ ಬಿಲ್ ನಷ್ಟವಾಗುತ್ತಿರುವ ಕಡೆ ಸ್ಮಾರ್ಟ್ ಮೀಟರ್ ಅಳವಡಿಸಲು ಕೇಂದ್ರ ಸರ್ಕಾರ ಹೇಳಿದೆ. ಅದರಂತೆ ಅಳವಡಿಕೆ ಮಾಡಲಾಗುತ್ತದೆ. ಮೀಟರ್ ಅಳವಡಿಕೆಗೆ ಗ್ರಾಹಕರ ಮೇಲೆ ಹೊರೆ ಹಾಕಲ್ಲ, ಅದನ್ನು ಆಯಾ ಕಂಪನಿಗಳೇ ಗಳೇ ಭರಿಸಲಿವೆ. ಆದರೆ ಯಾವುದೇ ಕಾರಣಕ್ಕೂ ಸ್ಮಾರ್ಟ್ ಮೀಟರ್, ಪ್ರೀಪೇಡ್ ಮೀಟರ್ ಗಳನ್ನು ಕೃಷಿ ಪಂಪ್ ಸೆಂಟ್ ಗಳಿಗೆ ಹಾಕಲ್ಲ. ಅಂತಹ ಪ್ರಯೋಗವನ್ನೂ ಮಾಡುವುದಿಲ್ಲ ಎಂದು ಇಂಧನ ಸಚಿವರು ಸ್ಪಷ್ಟಪಡಿಸಿದ್ದಾರೆ.



